ದಾವಣಗೆರೆ : ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶದಿಂದಾಗಿ ಕುಟುಂಬಗಳ ನಡುವೆ ನಡೆದ ಘರ್ಷಣೆ ಓರ್ವ ನಿವೃತ್ತ ಶಿಕ್ಷಕನ ಕೊಲೆಯಲ್ಲಿ ಅಂತ್ಯವಾಗಿದೆ.
ಕೃಷ್ಣಪ್ಪ (68) ಸಾವನ್ನಪ್ಪಿದ ನಿವೃತ್ತ ಶಿಕ್ಷಕ. ಮೃತ ಕೃಷ್ಣಪ್ಪ ಪುತ್ರ ವಿಜಯೇಂದ್ರಗೆ ತೀವ್ರ ಗಾಯಗಳಾಗಿವೆ. ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಪಂಚಾಯತಿ ವ್ಯಾಪ್ತಿಯ ಮಿನಿಗರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೋತ ಗುಂಪಿನಿಂದ ಕಟ್ಟಿಗೆಯಿಂದ ಕೃಷ್ಣಪ್ಪ ಮೇಲೆ ಹಲ್ಲೆ ಮಾಡಲಾಗಿದ್ದು, ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಮೃತ ಕೃಷ್ಣಪ್ಪ ಸಂಬಂಧಿ ಗೆಲುವು ಸಾಧಿಸಿದ್ದರು.
ಚುನಾವಣೆಯಲ್ಲಿ ಸೋಲುಕಂಡ ಗುಂಪೊಂದು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೃತ ಕೃಷ್ಣಪ್ಪ ಶವವನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.