ದಾವಣಗೆರೆ: ಲೆಕ್ಕ ಕೇಳಲು ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ಹೊನ್ನಾಳಿ ಹಾಗೂ ನ್ಯಾಮತಿಯ ಜನರು ಕೇಳಲಿ. ಆಗ ಲೆಕ್ಕ ಕೊಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕ ಶಾಂತನಗೌಡಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ರೇಣುಕಾಚಾರ್ಯ, ನಿಮ್ಮಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದೀರಾ. ನಿಮ್ಮ ನಡವಳಿಕೆ ಹಾಗೂ ಹೇಗೆ ಮಾತನಾಡುತ್ತೀರೋ ಹಾಗೆ ನಾನೂ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಸಂಘ ಸಂಸ್ಥೆಗಳು, ದಾನಿಗಳು ಕೊಟ್ಟಿರುವ ಆಹಾರ ಧಾನ್ಯಗಳ ಕಿಟ್ ಮೇಲೆ ನನ್ನ ಹೆಸರು ಹಾಕಿಲ್ಲ. ಇಂತಹ ಕೀಳು ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲ. ಹೊನ್ನಾಳಿ ಜನರಿಗೆ ನೀವು ಏನು ಮಾಡಿದ್ದೀರಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಾನು ಶಾಸಕನಲ್ಲ, ಜನರ ಸೇವಕ ಎಂದು ರೇಣುಕಾಚಾರ್ಯ ಹೇಳಿದ್ದಾರೆ.