ದಾವಣಗೆರೆ: ಅಮೆರಿಕದಲ್ಲಿ 3 ಲಕ್ಷ ಕೊರನಾ ಸೋಂಕಿತರಿದ್ದಾರೆ. ಅಲ್ಲಿಯೇ ನನ್ನ ಮಗ ಇರುವುದು. ಒಂದು ತಿಂಗಳಿನಿಂದ ಮನೆಯಲ್ಲಿಯೇ ಇದ್ದಾನೆ. ಸಹಜವಾಗಿದೆ ಆತಂಕ, ನೋವು ಕಾಡುತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭಾವುಕರಾದರು.
ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಖೈದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ಜನರು ಮುಖ್ಯ. ನನ್ನ ಮಗನ ಪರಿಸ್ಥಿತಿ ಬಗ್ಗೆ ನನಗೂ ನೋವಿದೆ. ನನ್ನ ಖಾಸಗಿ ಬದುಕಿಗಿಂತ ಕ್ಷೇತ್ರದ ಜನರಿಗೆ ಸ್ಪಂದಿಸುವುದು ಸಹ ಅಷ್ಟೇ ಮುಖ್ಯ ಎಂದರು.
ತಬ್ಲಿಘಿ ಜಮಾತ್ ಸಂಘಟನೆ ನಿಷೇಧ: ದೇಶಕ್ಕೆ ಮಾರಕವಾಗಿರುವ ತಬ್ಲಿಘಿ ಜಮಾತ್ ಸಂಘಟನೆಯನ್ನು ನಿಷೇಧಿಸುವಂತೆ ಪ್ರಧಾನ ಮಂತ್ರಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರದು. ಮನವಿ ಮಾಡುತ್ತೇನೆ ಎಂದರು.
ಉದ್ದೇಶ ಪೂರ್ವಕವಾಗಿ ಸೋಂಕು ಹರಡುವಂತೆ ಕೆಲ ಸಮುದಾಯ ವ್ಯಕ್ತಿಗಳು ನಡೆದುಕೊಳ್ಳುತ್ತಿದ್ದಾರೆ. ನಮಗೆ ದೇಶ ಮೊದಲು ನಂತರ ಜಾತಿ-ಧರ್ಮಗಳು. ನಮ್ಮ ಪಕ್ಷ ನಮಗೆ ಇದನ್ನು ಹೇಳಿಕೊಟ್ಟಿದೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕೆ: ಸೋಂಕು ತಡೆಗೆ ಕೆಲಸ ಮಾಡುತ್ತಿರುವವರ ಮೇಲೆ ಹಲ್ಲೆ, ದೌರ್ಜನ್ಯ ಎಸಗುವವರನ್ನು ಏನು ಮಾಡಬೇಕು? ದೇಶವನ್ನು ಕಾಡುತ್ತಿರುವ ಕೊರೊನಾ ಹಿಮ್ಮೆಟ್ಟಿಸಲು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್ಗಳ ಜೊತೆ ಕೆಲ ಕಿಡಿಗೇಡಿಗಳು ಗೌರವವಾಗಿ ನಡೆದುಕೊಂಡಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಹೇಳಿದರು.
ಇನ್ನೂ ಕೆಲವು ಕಡೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲು ನಿಮ್ಮ ಪಕ್ಷದ ಶಾಸಕ ಜಮೀರ್ ಅಹ್ಮದ್ರನ್ನು ಉಚ್ಛಾಟನೆಗೊಳಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರೇಣುಕಾಚಾರ್ಯ ತಿರುಗೇಟು ನೀಡಿದರು.
ಗುಂಡಿಕ್ಕಿ ಎಂದದ್ದು ನಿಜ: ತಬ್ಲಿಘಿ ಜಮಾತ್ ಸಂಘಟನೆ ಮಾಡುವ ಕೃತ್ಯ ನಾನು ಸಹಿಸಲ್ಲ. ನಾನು ಅಲ್ಪ ಸಂಖ್ಯಾತರ ವಿರೋಧಿ ಅಲ್ಲ. ರಾಜ್ಯದಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಕಂಡು ಮನಸ್ಸಿಗೆ ನೋವಾಗಿ ತಬ್ಲಿಘಿಯಿಂದ ಬಂದವರನ್ನು ಗುಂಡಿಕ್ಕಿ ಎಂದು ಹೇಳಿದ್ದು ಸತ್ಯ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.