ದಾವಣಗೆರೆ: ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಅಪರಾಧಿ ತಂದೆಗೆ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್ಟಿಎಸ್ಪಿ (ಪೋಕ್ಸೋ ಕೋರ್ಟ್) ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿವಾಸಿ ದುರಗಪ್ಪ ಶಿಕ್ಷೆಗೊಳಗಾದ ಪಾಪಿ ತಂದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ತಗಡಿನ ಶೀಟ್ ಮನೆಯಲ್ಲಿ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ತಂದೆಯು ಜೈಲು ಪಾಲಾಗಿದ್ದಾನೆ. ಆರೋಪಿಯು ಬಟ್ಟೆ ಹಾಗೂ ತಿಂಡಿ ಆಮಿಷ ಒಡ್ಡುತ್ತ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ. ದುರಗಪ್ಪನ ಕೃತ್ಯದ ವಿಚಾರ ಗೊತ್ತಾದ ಬಳಿಕ ಆತನ ಪತ್ನಿಯೇ ತಡೆದಿದ್ದಳು. ಬಳಿಕ ಆರೋಪಿ ಪತಿ ದುರಗಪ್ಪ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತಂತೆ ತನಿಖೆ ಕೈಗೊಂಡ ಅಂದಿನ ಠಾಣಾಧಿಕಾರಿಯು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಪಾದ ಎನ್. ಆರೋಪಿ ತಂದೆ ದುರುಗಪ್ಪಗೆ 20 ವರ್ಷ ಜೈಲು ಶಿಕ್ಷೆ, 12 ಸಾವಿರ ರೂಪಾಯಿ ದಂಡ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಹಾತ್ವದ ತೀರ್ಪು ನೀಡಿದ್ದಾರೆ. ಈ ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ ಸಾಕ್ಷಿಗಳ ವಿಚಾರಣೆ ಮಾಡಿದ್ದು, ಸರ್ಕಾರಿ ವಕೀಲರಾದ ಕೆಜಿ ಜಯಪ್ಪ ಅವರು ಸಂತ್ರಸ್ತೆ ಪರ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ : ರುಂಡ - ಮುಂಡ ಕತ್ತರಿಸಿದ ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಅಪ್ರಾಪ್ತೆ ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ: ಪ್ರತ್ಯೇಕ ಪ್ರಕರಣವೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಆಕೆಗೆ ಮಗು ಕರುಣಿಸಿದ ಆರೋಪಿಗೆ ವಿಜಯಪುರ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ಹಾಗೂ 26 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
23 ವರ್ಷದ ಅರ್ಜುನ ಹಣಮಂತ ಕ್ಷತ್ರಿ ಶಿಕ್ಷೆಗೆ ಒಳಗಾದ ಅಪರಾಧಿ. ಹೊರ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರ ನಿವಾಸಿದ ಆರೋಪಿಯು ಎಸ್ಎಸ್ಎಲ್ಸಿ ಓದುತ್ತಿದ್ದ ಅಪ್ರಾಪ್ತೆ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಗರ್ಭಿಣಿಯಾದ ಬಾಲಕಿಗೆ ಮಗು ಜನಿಸಿತ್ತು. ಈ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಮ ನಾಯಕ ಅವರು ಆರೋಪಿ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ನ್ಯಾಯವಾದಿ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.