ಹರಿಹರ: ಶಾಂತಿ ಸಭೆಯ ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಬಾವುಟ, ಬಂಟಿಂಗ್ಸ್ ಹಾಗೂ ಬಟ್ಟೆಯ ತೋರಣಗಳನ್ನು ತೆರವುಗೊಳಿಸುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿದೆ.
ಈ ರಸ್ತೆಯಲ್ಲಿ ಬಾವುಟ, ಬಂಟಿಂಗ್ಸ್, ತೋರಣ ಕಟ್ಟದಂತೆ ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೂ, ಶಾಂತಿ ಸಭೆಯ ನಿರ್ಧಾರಗಳನ್ನು ಉಲ್ಲಂಘಿಸಿಸಲಾಗಿತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ಹಾಲಿ ಶಾಸಕ ಎಸ್.ರಾಮಪ್ಪ ಹಾಗೂ ಮಾಜಿ ಶಾಸಕರ ಮಧ್ಯೆ ವಾಗ್ವಾದ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನವೂ ವಿಫಲವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಚ್ ನಡೆಸಿ, ಜನರ ಗುಂಪನ್ನು ಚದುರಿಸಿದರು. ಅಲ್ಲದೆ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಶನಿವಾರ ಸಂಜೆಯಿಂದ ಭಾನುವಾರ ಬೆಳಗ್ಗೆ 6ರವರೆಗೆ ಸೆಕ್ಷನ್ 144 ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅದೇಶಿಸಿದ್ದರು. ಎಸ್ಪಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪಿನ ಮುಖಂಡರ ಜೊತೆ ಶಾಂತಿ ಸಭೆ ನಡೆಸಿ ತೋರಣಗಳನ್ನು ತೆರವುಗೊಳಿಸುವಂತೆ ತೀರ್ಮಾನ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಲಾಯಿತು.
ಇನ್ನು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸ್ಥಳದಲ್ಲಿ ಎಸ್ಪಿ ಹನಮಂತರಾಯ, ಎಎಸ್ಪಿ ಎಂ. ರಾಜೀವ್, ಸಿಪಿಐ ಗುರುನಾಥ್, ಲಕ್ಷ್ಮಣ್ ನಾಯ್ಕ, ಪಿಎಸ್ಐ ಡಿ.ರವಿಕುಮಾರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.