ದಾವಣಗೆರೆ: ನಟಸಾರ್ವಭೌಮ ಸಿನಿಮಾ ವಿಜಯಯಾತ್ರೆ ನಡೆಸುತ್ತಿರುವ ಚಿತ್ರತಂಡ ನಿನ್ನೆ ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಇನ್ನಿತರ ಜಿಲ್ಲೆಗಳಿಗೆ ಭೇಟಿ ನೀಡಿದೆ. ಪ್ರಮುಖ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿರುವ ಚಿತ್ರತಂಡ ಅಭಿಮಾನಿಗಳನ್ನು ಭೇಟಿ ಮಾಡಿ ಬರುತ್ತಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್ ರಾಜ್ಕುಮಾರ್, ಶಿವಣ್ಣ , ರಾಘಣ್ಣ ಹಾಗೂ ನಾನು ಒಟ್ಟಾಗಿ ಸಿನಿಮಾ ಮಾಡಬೇಕು ಎಂಬ ಆಸೆ ನಮಗೂ ಇದೆ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಒಳ್ಳೆ ಕಥೆಗಾಗಿ ಕಾಯುತ್ತಿದ್ದೇವೆ. ನಮಗೆ ಹೊಂದುವ ಕಥೆ ಸಿಕ್ಕರೆ ಖಂಡಿತ ಒಟ್ಟಿಗೆ ನಟಿಸುತ್ತೇವೆ ಎಂದರು. ನಟಸಾರ್ವಭೌಮ ಸಿನಿಮಾ 25 ದಿನಗಳನ್ನು ಪೂರೈಸಿದೆ. ಅದಕ್ಕಾಗಿ ದಾವಣಗೆರೆಗೆ ಭೇಟಿ ನೀಡಿದ್ದೇನೆ. ಇದು ನನ್ನ ಫೇವರೆಟ್ ಜಾಗ. ಸದ್ಯಕ್ಕೆ ಹುಬ್ಬಳ್ಳಿಯಲ್ಲಿ 'ಯುವರತ್ನ' ಚಿತ್ರೀಕರಣ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿರುವ ನಟಿ ಸುಮಲತಾ ಅವರಿಗೆ ಬೆಂಬಲ ನೀಡುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುನೀತ್, ನಟ-ನಟಿಯರ ರಾಜಕೀಯ ಪ್ರವೇಶದ ಬಗ್ಗೆ ನಾನು ಏನೂ ಹೇಳುವುದಿಲ್ಲ. ನಾನೊಬ್ಬ ನಟ ಅಷ್ಟೆ. ನಮ್ಮ ಕುಟುಂಬ ಯಾವೂದೇ ಕಾರಣಕ್ಕೂ ರಾಜಕೀಯಕ್ಕೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.