ದಾವಣಗೆರೆ: ನಗರದ ನವೀಕೃತ ರೈಲು ನಿಲ್ದಾಣಕ್ಕೆ ಕೊಡುಗೈ ದಾನಿ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಬೇಕೆಂಬ ಕೂಗು ಕೇಳಿ ಬರ್ತಿದೆ. ಬಡವರ ಪಾಲಿನ ಆಶಾಕಿರಣರಾಗಿದ್ದ ಹನುಮಂತಪ್ಪನವರು ಕೆಲಸ ಇಲ್ಲದ ಕೈಗಳಿಗೆ ಕೆಲಸ ನೀಡಿದವರು. ದಾವಣಗೆರೆಯಲ್ಲಿ ಡಿಸಿಎಂ ಕಾಟನ್‌ಮಿಲ್ ನಿರ್ಮಿಸಿ ಜಿಲ್ಲೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಅಲ್ಲದೇ, ಭೀಕರ ಬರಗಾಲ ಆವರಿಸಿದಾಗ ಇಡೀ ದಾವಣಗೆರೆಗೆ ಬುತ್ತಿ ರೊಟ್ಟಿಯನ್ನು ತಯಾರಿಸಿ ಚಕ್ಕಡಿ ಗಾಡಿಯಲ್ಲಿ ಜನರಿಗೆ ಹಂಚಿದ ಸಂಗತಿ ಇಂದಿಗೂ ಇಲ್ಲಿನ ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ ಹೀಗಾಗಿ ಅವರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡುವಂತೆ ಜನ ಒತ್ತಾಯಿಸಿದ್ದಾರೆ.
ಬಡವರ ಮಕ್ಕಳಿಗೆ ಉಚಿತವಾಗಿ ಮದುವೆ ಮಾಡಲು ಧರ್ಮಶಾಲಾಗಳನ್ನು ನಿರ್ಮಿಸಿ ಇಂದಿಗೂ ಬಡವರಿಗೆ ಆಸೆಯಾಗಿದ್ದಾರೆ. ಇಂಥ ದಾನಿಯ ಹೆಸರನ್ನು ದಾವಣಗೆರೆಯ ನವೀಕೃತ ರೈಲ್ವೆ ನಿಲ್ದಾಣಕ್ಕಿಡಬೇಕೆಂಬ ಕೂಗು ಕೇಳಿ ಬಂದಿದೆ. ರೈಲ್ವೆ ನಿಲ್ದಾಣಕ್ಕೆ ಇದೇ ಹೆಸರಿಡಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಹೆಸರನ್ನಿಡುವಂತೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿವೆ.
ಇದನ್ನೂ ಓದಿ: ಕಾಡೇ ಊರು..ಅಂಬಾಸಿಡರ್ ಕಾರೇ ಸೂರು.. ಚಂದ್ರನ ಬಾಳಲ್ಲಿ ಕಗ್ಗತ್ತಲು..!
ರಾಜನಹಳ್ಳಿ ಹನುಮಂತಪ್ಪನವರು ದಾವಣಗೆರೆಯಲ್ಲಿ ಜನರಿಗಾಗಿ ಉದ್ಯಾನಗಳು, ಆಸ್ಪತ್ರೆಗಳು, ಕಾಟನ್‌ಮಿಲ್, ಧರ್ಮಶಾಲಾಗಳು, ಹೆರಿಗೆ ಆಸ್ಪತ್ರೆ ನಿರ್ಮಿಸಿ ಬಡವರಿಗೆ ಆಸರೆಯಾಗಿದ್ದವರು. ಇಂಥವರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕೆಂಬುದು ಸ್ಥಳೀಯರ ಆಗ್ರಹ. 25 ವರ್ಷಗಳಿಂದ ಇದಕ್ಕಾಗಿ ಜನರು ಆಗ್ರಹಿಸುತ್ತಿದ್ದರೂ, ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.