ಹರಿಹರ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೇತನ ಸಮಸ್ಯೆ ಕುರಿತು ನಡೆಯುತ್ತಿದ್ದ ಸಾಂಕೇತಿಕ ಧರಣಿ ಸ್ಥಳಕ್ಕೆ ಶಾಸಕ ಎಸ್. ರಾಮಪ್ಪ ಭೇಟಿ ನೀಡಿ ನೌಕರರ ಮನವಿ ಸ್ವೀಕರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೀರಿ. 5 ತಿಂಗಳಿನಿಂದ ವೇತನ ಬಿಡುಗಡೆಯಾಗುವುದು ವಿಳಂಬವಾಗುತ್ತಿರುವ ಹಿನ್ನೆಲೆ ನೌಕರರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇದರ ನಡುವೆಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೋವಿಡ್-19 ಮತ್ತು ರೋಗಿಗಳ ಆರೈಕೆಯಲ್ಲಿ ಕರ್ತವ್ಯ ನಿರತರಾಗಿದ್ದೀರಿ ಎಂದು ಹೇಳಿದರು.
ಸ್ವಚ್ಛತೆ, ಕೋವಿಡ್-19 ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಸಹ ಕಾರ್ಯ ನಿರ್ವಹಿಸುತ್ತಿದ್ದು, ಐದಾರು ತಿಂಗಳಿನಿಂದ ವೇತನವಿಲ್ಲವೆಂದರೆ ಕುಟುಂಬ ನಿರ್ವಹಣೆ ಕಷ್ಟಕರ. ಹಾಗಾಗಿ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.