ಹರಿಹರ: ಕೇಂದ್ರ ಸರ್ಕಾರದ ಪೆಟ್ರೋಲ್-ಡೀಸೆಲ್‌ಗಳ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಹರಿಹರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ಪ್ರತಿಭಟನೆ ನಡೆಸಿದರು.
ನಗರದ ಪಕ್ಕಿರಸ್ವಾಮಿ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಣಿ ಚೆನ್ನಮ್ಮ ವೃತ್ತದ ಮೂಲಕ ಗಾಂಧಿ ವೃತ್ತ ನಂತರ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ತಹಶೀಲ್ದಾರ್‌ಗೆ ಮನವಿಯನ್ನು ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕ ಎಸ್. ರಾಮಪ್ಪ, ಕೊರೊನಾದಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಜನಸಾಮಾನ್ಯರ ನೆರವಿಗೆ ಬರುವುದು ಅವರ ಕರ್ತವ್ಯ, ಅದನ್ನು ಬಿಟ್ಟು ಗಾಯದ ಮೇಲೆ ಬರೆಯೆಳೆದಂತೆ ತೈಲೋತ್ಪಪ್ಪನ್ನಗಳ ಬೆಲೆಯನ್ನು ಏರಿಕೆ ಮಾಡಿರುವುದು ಖಂಡನೀಯ ಎಂದರು.
ಜಿ.ಪಂ ಮಾಜಿ ಸದಸ್ಯ ಎನ್. ನಾಗೇಂದ್ರಪ್ಪ ಮಾತನಾಡಿ, ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ತೈಲ ಕಂಪನಿಗಳ ಕೈಗೊಂಬೆಯಾಗಿ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ ಮಾತನಾಡಿ, ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣ ಮಾಡುವ ಕಡೆ ಗಮನ ಹರಿಸದೆ ಖಜಾನೆ ಲೂಟಿ ಮಾಡುತ್ತಿದ್ದಾರೆ ಎಂದರು. ಇನ್ನೂ ಕೆಪಿಸಿಸಿ ನೂತನ ಅಧ್ಯಕ್ಷರ ಆದೇಶದ ಮೇರೆಗೆ ಈ ಪ್ರತಿಭಟನೆಯನ್ನು ಮಾಡಿದ್ದು, ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬಿದಲಿ, ಎಲ್.ಬಿ. ಹನುಮಂತಪ್ಪ, ನಗರಸಭಾ ಸದಸ್ಯರಾದ ಎಸ್.ಎಂ. ವಸಂತ್, ಕೆ.ಜಿ. ಸಿದ್ದೇಶ್, ಶಂಕರ್ ಕಟಾವ್ಕರ್, ಮುಖಂಡರಾದ ಬಿ.ರೇವಣಸಿದ್ದಪ್ಪ, ಪರಶುರಾಮ್ ಕಾಟ್ವೆ, ಸಿ.ಎನ್ ಹುಲಿಗೇಶ್, ತಿಪ್ಪೇಶ್, ಜಿಗಳಿ ಆನಂದಪ್ಪ, ಕೆ.ಜಡಿಯಪ್ಪ, ಜಿ.ವಿ. ವೀರೇಶ್, ನೇತ್ರಾವತಿ, ಭಾಗ್ಯದೇವಿ, ಪಾರ್ವತಿ ಮತ್ತು ವಿದ್ಯಾಗಡದ್ ಹಾಗೂ ಮತ್ತಿತರರು ಇದ್ದರು.