ದಾವಣಗೆರೆ : ಆಸ್ತಿ ವಿವಾದ ಹಿನ್ನೆಲೆ ಕೆಲವರು ತೋಟಕ್ಕೆ ನುಗ್ಗಿ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನನ್ನ ಕಣ್ಣ ಮುಂದೆಯೇ ನಡೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾದಾಗ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ತೋಟದ ಮಾಲೀಕ ಆನಂದ ಆರೋಪ ಮಾಡಿದ್ದಾರೆ. ಈ ಸಂಬಂಧ ಐವರ ಮೇಲೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
'ಜೆಸಿಬಿ ಬಳಸಿ ಸುಮಾರ 10 ವರ್ಷದ ಅಡಿಕೆ ಮರಗಳನ್ನು ಸರ್ವನಾಶ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಕ್ಕದ ತೋಟದ ಮಾಲೀಕರು ಹಾಗೂ ತಮ್ಮ ನಡುವೆ ಜಗಳವಿತ್ತು. ಸದ್ಯ ಅಡಿಕೆ ತೋಟ ನಮ್ಮ ಸ್ವಾಧೀನದಲ್ಲಿದೆ. ಆದರೆ, ಇದ್ದಕ್ಕಿದ್ದಂತೆ ಆರೋಪಿಗಳು ಜೆಸಿಬಿ ತಂದು ಅಡಿಕೆ ಮರಗಳ ನಾಶ ಮಾಡಿದ್ದಾರೆ. ಇನ್ನು ತೋಟದಲ್ಲಿದ್ದ ಬೋರ್ವೆಲ್ ಕೂಡ ಹಾಳು ಮಾಡಿದ್ದಾರೆ' ಎಂದು ಆರೋಪಿಸಿ ಕಣದಮನಿ ಸುರೇಶ ಹಾಗೂ ಜಗದೀಶ ಸೇರಿದಂತೆ ಒಟ್ಟು ಐವರ ವಿರುದ್ಧ ಆನಂದ ಅವರು ದೂರು ದಾಖಲಿಸಿದ್ದಾರೆ.
ಘಟನೆಯಿಂದ ತನಗೆ ಪ್ರಾಣಭಯ ಇದೆ. ಹಾಗಾಗಿ ರಕ್ಷಣೆ ನೀಡುವಂತೆಯೂ ತೋಟದ ಮಾಲೀಕ ಆನಂದ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಲೇಬೆನ್ನೂರು ಪೋಲಿಸ್ ಠಾಣೆಯ ಪೋಲಿಸರು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಹಿಳೆಗೆ ಚಾಕು ಇರಿದು ಕೊಲೆ : ಜುಲೈ 11 ರಂದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ. ಕೆ. ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮಹಿಳೆಗೆ ಹರಿತ ಆಯುಧಗಳಿಂದ ಇರಿದು ಹತ್ಯೆ ಮಾಡಿದ್ದರು. ಜೊತೆಗಿದ್ದ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು. ವಿಜಯಲಕ್ಷ್ಮೀ ಮಠ ಎಂಬುವರು ಮೃತಪಟ್ಟಿದ್ದರು. ಇವರನ್ನು ರಕ್ಷಿಸಲು ಹೋದ ನಾಲ್ವರು ಮಕ್ಕಳಾದ ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಮೇಲೂ ಹಂತಕರು ಹಲ್ಲೆ ಮಾಡಿ ಗಾಯಗೊಂಡಿದ್ದರು. ಘಟನೆಗೆ ಆಸ್ತಿ ವಿವಾದವೇ ಕಾರಣ ಎಂದು ಹೇಳಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಣ್ಣನನ್ನು ಹತ್ಯೆ ಮಾಡಿ ತಮ್ಮಂದಿರು : ಜುಲೈ 14 ರಂದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಮ್ಮಂದಿರೇ ಸೇರಿ ಅಣ್ಣನನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮಡಿಕೇರಿಯ ಚೆಂಬು ಗ್ರಾಮದ ಬಳಿ ನಡೆದಿತ್ತು. ಉಸ್ಮಾನ್ (63) ಎಂಬುವವರನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಹಾಗೂ ಸಂಪಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ : ಆಸ್ತಿ ವಿವಾದ: ಕೊಡಗಿನಲ್ಲಿ ಸಹೋದರರಿಂದಲೇ ಅಣ್ಣನ ಭೀಕರ ಹತ್ಯೆ