ದಾವಣಗೆರೆ: ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ದೂರು-ದುಮ್ಮಾನಗಳಿದ್ದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಮಾತನಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು. ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿಎಸ್ವೈ ಪರ ಇರುವವರಿಗೆ ಮಾತ್ರ ಸ್ಥಾನ ನೀಡಿದ್ದಾರೆ ಎಂಬ ಆರೋಪಕ್ಕೆ ಸಚಿವರು ಇಂದು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದರು.
"ಬಿಜೆಪಿಯಲ್ಲಿ ಇರುವವರೆಲ್ಲರೂ ಒಬ್ಬರಿಗೆ ಆಪ್ತರು ಇನ್ನೊಬ್ಬರಿಗೆ ಆಪ್ತರಲ್ಲ ಎನ್ನುವಂಥದ್ದಿಲ್ಲ. ಪಕ್ಷದಲ್ಲಿ ಯಾರಿಗಾದರೂ ದೂರು-ದುಮ್ಮಾನಗಳಿದ್ದರೆ ರಾಜ್ಯಾಧ್ಯಕ್ಷರಿದ್ದಾರೆ. ಅವರಿಗೆ ಹೇಳುವುದು ಬೇಡವೆಂದರೆ ರಾಷ್ಟ್ರಾಧ್ಯಕ್ಷರಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ. ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ಕೊಡುವುದರಿಂದ ಯಾವುದೇ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ನೀವು ಪಕ್ಷದ ಹಿತ ಬಯಸುವುದಾದರೆ ಬಹಿರಂಗ ಹೇಳಿಕೆಗಳನ್ನು ತಕ್ಷಣ ನಿಲ್ಲಿಸಿ. ನಮ್ಮ ರಾಜ್ಯಾಧ್ಯಕ್ಷರನ್ನು ನಮ್ಮ ರಾಷ್ಟ್ರಾಧ್ಯಕ್ಷರು ಆಯ್ಕೆ ಮಾಡಿದ್ದಾರೆ. ಎಲ್ಲಾ ಹಿರಿಯ ನಾಯಕರು ಚರ್ಚೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ಘಟಕದ ನಿರ್ಣಯ. ರಾಷ್ಟ್ರೀಯ ಘಟಕ ಒಮ್ಮೆ ನಿರ್ಣಯ ಮಾಡಿದ ನಂತರ ನಿಮಗೆ ಏನಾದರೂ ಇಲ್ಲಿ ತಪ್ಪಾಗುತ್ತಿದೆ ಎಂದರೆ ಈ ವಿಚಾರ ಸರಿಯಾಗಬೇಕು ಎಂದೆನಿಸಿದರೆ ರಾಷ್ಟ್ರೀಯ ಅಧ್ಯಕ್ಷರ ಬಳಿ ಹೋಗಿ ಮಾತನಾಡಿ ಅಥವಾ ರಾಷ್ಟ್ರೀಯ ಪ್ರಮುಖರಾದ ಅಮಿತ್ ಶಾ, ರಾಜನಾಥ್ ಸಿಂಗ್ ಇದ್ದಾರೆ, ಅವರ ಜೊತೆ ಮಾತನಾಡಿ. ಆದರೆ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ"- ಜೋಶಿ.
'ಸಿದ್ದರಾಮಯ್ಯನವರೇ ಯಾರದ್ದು ಬುರುಡೆ ಸರ್ಕಾರ': ಬಿಜೆಪಿ ಸರ್ಕಾರ ಬುರುಡೆ ಸರ್ಕಾರ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಬುರುಡೆ ಯಾರು ಎಂಬುದು ಈ ಹಿಂದೆ ನೀವೇ ಮಾತನಾಡಿದ್ದೀರಿ ಸಿದ್ದರಾಮಯ್ಯನವರೇ. 1971ರಿಂದ ಗರೀಬಿ ಹಟಾವೋ ಎಂದು ಹೇಳಿದವರು ನೀವು. 1971ರಿಂದ 1977 ರವರೆಗೆ, 1980ರಿಂದ 1984ರವರೆಗೆ, 1984ರಿಂದ 1989ರವರೆಗೆ 1991ರಿಂದ 1996ರವರೆಗೆ, 2004 ರಿಂದ 2010ರವರೆಗೆ ಹೀಗೆ ಈ ಎಲ್ಲಾ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಇಷ್ಟು ವರ್ಷಗಳ ಕಾಲ ನೀವು ಆಡಳಿತ ನಡೆಸಿದ್ದರೂ ನಿಮಗೆ ಒಂದು ಗ್ಯಾಸ್ ಕೊಡಲು ಆಗಲಿಲ್ಲ. ಇಡೀ ದೇಶದಲ್ಲಿ ಇವರ ಆಡಳಿತಾವಧಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಬೇಕಾದರೆ ಹರಸಾಹಸದ ಪರಿಸ್ಥಿತಿ ಇತ್ತು. ಒಂದು ಮನೆ ಕೊಡಲು ನಿಮಗೆ ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ಮುಂದುವರೆದು ಮಾತನಾಡಿ, ಕಾಂಗ್ರೆಸ್ ಪಕ್ಷದವರು 1960ರಿಂದ 2014ರವರೆಗೆ ಈ ದೇಶದಲ್ಲಿ ಸೂರು ಇಲ್ಲದವರಿಗೆ ಸೂರು ಎಂದು ಹೇಳಿಕೊಂಡ ಬಂದರು. ಇದಕ್ಕೆ ಇಂದಿರಾ ಅವಾಸ್ ಯೋಜನೆ ಎಂಬ ಹೆಸರು ಕೊಟ್ಟು ಮೂರು ಕೋಟಿ ಮೂವತ್ತು ಲಕ್ಷ ಮನೆಗಳು ಕೊಟ್ಟಿದ್ದೇವೆ ಎಂದು ಲೆಕ್ಕ ಕೊಟ್ಟಿದ್ದಾರೆ. ಆದರೆ ಕಳೆದ ವರ್ಷದಲ್ಲಿ ಮೋದಿಯವರ ಆಡಳಿತದಲ್ಲಿ ನಾಲ್ಕು ಕೋಟಿ ಮನೆಗಳನ್ನು ನಾವು ಕೊಟ್ಟಿದ್ದೇವೆ. ಸಿದ್ದರಾಮಯ್ಯನವರೇ ಇವಾಗ ಹೇಳಿ ಯಾರದ್ದು ಬುರುಡೆ ಸರ್ಕಾರ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯನವರು ನಿಸ್ಸೀಮರು. ಹಾಗಾಗಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅವರು ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಯತ್ನಾಳ್ ಅವರನ್ನು ನಿಮ್ಹಾನ್ಸ್ಗೆ ಸೇರಿಸಬೇಕು: ರೇಣುಕಾಚಾರ್ಯ