ದಾವಣಗೆರೆ : ಕಳ್ಳತನ, ದರೋಡೆ ಮಾಡಲು ಹೊಂಚು ಹಾಕುತ್ತಿರುವಾಗ ಖದೀಮರು ಪೊಲೀಸರ ಅತಿಥಿಯಾಗಿರುವ ಪ್ರಕರಣ ದಾವಣಗೆರೆ ತಾಲೂಕಿನ ದಾವಣಗೆರೆ-ಚನ್ನಗಿರಿ ರಸ್ತೆಯ ಕೈದಾಳ್ ಕ್ರಾಸ್ ಬಳಿ ನಡೆದಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಗಸ್ತಿನಲ್ಲಿದ್ದಾಗ ಕೈದಾಳ್ ಕ್ರಾಸ್ನ ಸ್ವಲ್ಪ ದೂರದಲ್ಲಿ ಒಂದು ಇನ್ನೋವಾ ಕಾರು ನಿಂತಿರುವುದು ಕಂಡು ಬಂದಿದೆ. ದರೋಡೆಗೆ ಹೊಂಚು ಹಾಕಿ ಕಾರಿನ ಬಳಿಯಿದ್ದ 5 ಜನ ಅನುಮಾನಾಸ್ಪದವಾಗಿ ಕಂಡು ಬಂದವರನ್ನು ವಿಚಾರಿಸಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ವಿಚಾರಿಸಲು ಮುಂದಾಗಿದ್ದೇ ತಡ ಆರೋಪಿಗಳು ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಓರ್ವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದಿರುವ ವ್ಯಕ್ತಿ ಸಾಧಿಕ್‌ವುಲ್ಲಾ ಅಲಿಯಾಸ್ ರಾಜೀಕ್ (23) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲ್ಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ ಎಂದು ತಿಳಿದುಬಂದಿದೆ.
ಆರೋಪಿ ಮೇಲಿವೆ ಐದು ಪ್ರಕರಣಗಳು: ಆರೋಪಿ ಉಪಯೋಗಿಸಿದ್ದ ಕಾರನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿಗಳು ಕಳ್ಳತನ, ದರೋಡೆ ಮಾಡಲು ಹೊಂಚು ಹಾಕುತ್ತಿರುವುದು ದೃಢಪಟ್ಟ ಬೆನ್ನಲ್ಲೇ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಸಾದಿಕ್ ಉಲ್ಲಾ ಅಲಿಯಾಸ್ ರಾಜೀಕ್ ಮೇಲೆ ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ 2 ಪ್ರಕರಣಗಳು ಮತ್ತು ಮಾಯಕೊಂಡ ಠಾಣೆಯಲ್ಲಿ 1 ಪ್ರಕರಣ, ಬಿಳಿಚೋಡು ಠಾಣೆಯಲ್ಲಿ 2 ಪ್ರಕರಣಗಳಿರುವುದು ಗೊತ್ತಾಗಿದೆ.
ಇನೋವಾ ಕಾರಿನಲ್ಲಿದ್ದಿದ್ದು ಏನು? : ಈ 5 ಪ್ರಕರಣಗಳಿಗೆ ಸಂಂಧಿಸಿದಂತೆ 3,02,000 ರೂಪಾಯಿ ನಗದು, ಅಶೋಕ ಲೈಲ್ಯಾಂಡ್ ವಾಹನ, ಕೆಎ-41-8904ನೇ ಇನ್ನೋವಾ ಕಾರು, 1 ಲಾಂಗ್ (ಮಚ್ಚು), 2 ಮಚ್ಚು, ಒಂದು ಚಿಕ್ಕ ಪ್ಲಾಸ್ಟಿಕ್ ಕವರಿನಲ್ಲಿ ಖಾರದ ಪುಡಿ, 2 ದೊಣ್ಣೆಗಳು, 2 ಹಗ್ಗದ ತುಂಡುಗಳು, 2 ಕಬ್ಬಿಣದ ರಾಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಸೇರಿ ಅಂದಾಜು ಒಟ್ಟು ಮೌಲ್ಯ 16,00,000 ರೂಪಾಯಿ ಆಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧೀಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿ ಬಿಡದ ಖದೀಮರು.. ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ