ದಾವಣಗೆರೆ: ಸ್ವಗ್ರಾಮದಲ್ಲೇ ಶಾಸಕ ಶಿವಗಂಗಾ ಬಸವರಾಜ್ಗೆ ಜನ ಘೇರಾವ್ ಹಾಕಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ನಡೆದಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುವಂತೆ ಪಟ್ಟು ಹಿಡಿದಿದ್ದ ಹಿರೇಕೊಗಲೂರು ಗ್ರಾಮದ ಜನ ಕಾರು ಮುಂದೆ ನಿಂತು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಚುನಾವಣೆ ಪೂರ್ವದಲ್ಲಿ ಹಿರೇಕೊಗಲೂರು ಗ್ರಾಮದ ಸರ್ವೇ ನಂಬರ್ 46ರಲ್ಲಿ ಗುಡಿಸಲು ಹಾಕಿಕೊಂಡಿದ್ದ ನಿರಾಶ್ರಿತರಿಗೆ ಅದೇ ಸ್ಥಳದಲ್ಲೇ ನಿವೇಶನ ನೀಡುತ್ತೇನೆಂದು ಶಾಸಕ ಶಿವಗಂಗಾ ಬಸವರಾಜ್ ಮಾತು ಕೊಟ್ಟಿದ್ದರು. ಆದ್ರೆ ಗ್ರಾಮಸ್ಥರು ಮಾತ್ರ ನಿವೇಶನ ನೀಡುವಂತೆ ನಿರಾಶ್ರಿತರಿಗೆ ಮಂಜೂರು ಮಾಡಿದ್ದ ಜಾಗದಲ್ಲಿ 20 ಅಡಿಯಷ್ಟು ಗುಂಡಿ ಹೊಡೆದು ಕೆರೆ ನಿರ್ಮಾಣಕ್ಕೆ ಹೊರಟಿದ್ದರು.
ಶಾಸಕರ ಕಾರಿಗೆ ಘೇರಾವ್ ಹಾಕಿ ಆಕ್ರೋಶ: ನಿರಾಶ್ರಿತರು ಗ್ರಾಮದ ದೇವರ ಜಮೀನಿನಲ್ಲೇ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಅಂದು ಚುನಾವಣಾ ಪೂರ್ವದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ನಿರಾಶ್ರಿತರಿಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತು ಕೊಟ್ಟಿದ್ದರು. ಆದರೆ ಶಾಸಕರು, ಸರ್ವೇ ನಂಬರ್ 46ರ ಬದಲು ಸರ್ವೇ ನಂಬರ್ 81ರಲ್ಲಿ ನಿವೇಶನ ಕೊಡುವುದಾಗಿ ತಿಳಿಸಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೇ ನಂಬರ್ 46 ರಲ್ಲೇ ನಿವೇಶನ ನೀಡುವಂತೆ ಜನ ಪಟ್ಟು ಹಿಡಿದಿದ್ದಾರೆ.
ಗುಡಿಸಲು ಹಾಕಿಕೊಂಡಿದ್ದ ಸ್ಥಳದಲ್ಲಿಯೇ ನಿವೇಶನ ನೀಡುವಂತೆ ಪಟ್ಟು: ಶಾಸಕರು ನಿವೇಶನ ಮಂಜೂರು ಮಾಡಲು ಆಯ್ಕೆ ಮಾಡಿರುವ ಸರ್ವೇ ನಂಬರ್ 81ರ ಜಮೀನು ಬಳಿ ಸ್ಮಶಾನದ ಜಾಗ ಇರುವುದರಿಂದ ನಿರಾಶ್ರಿತರು ಹೋಗಲು ಹಿಂದೇಟು ಹಾಕ್ತಿದ್ದಾರೆ. ಅಲ್ಲದೇ ತಮಗೆ ಸ್ಮಶಾನದ ಬಳಿಯೇ ನಿವೇಶನ ನೀಡಿದರೆ ಹೇಗೆ? ಎಂದು ಪ್ರಶ್ನಿಸಿದರು. ಈ ಮೊದಲು ಸರ್ವೇ ನಂಬರ್ 46ರಲ್ಲಿಯೇ ಜನ ಗುಡಿಸಲು ಹಾಕಿಕೊಂಡಿದ್ದರು. ಹೀಗಾಗಿ ಅಲ್ಲಿಯೇ ಎಲ್ಲರಿಗೂ ನಿವೇಶನ ನೀಡುವಂತೆ ಪಟ್ಟು ಹಿಡಿದಿರುವುದು ಶಾಸಕರಿಗೆ ತಲೆನೋವಾಗಿ ಪರಿಣಮಿಸಿದೆ.
ಚನ್ನಗಿರಿ ಠಾಣೆ ಎದುರು ಶಾಸಕರಿಂದ ಪ್ರತಿಭಟನೆ : ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಠಾಣೆಯೆದುರು ಕುಳಿತು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ (ಜುಲೈ 16-2023) ರಂದು ಪ್ರತಿಭಟನೆ ನಡೆಸಿದ್ದರು. ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿನಾಕಾರಣ ದೂರು ದಾಖಲು ಮಾಡುತ್ತಿದ್ದಾರೆ. ಈ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಚನ್ನಗಿರಿ ಪೊಲೀಸ್ ಠಾಣೆ ಸಿಪಿಐ ಮಧು ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಕಳೆದ ಒಂದು ತಿಂಗಳಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಜಿ ಶಾಸಕರ ಬೆಂಬಲಿಗರ ಮಾತು ಕೇಳಿ ಉದ್ದೇಶಪೂರ್ವಕವಾಗಿ ದೂರು ದಾಖಲಿಸುವ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚನ್ನಗಿರಿ ಠಾಣೆ ಶಾಸಕರಿಂದ ಪ್ರತಿಭಟನೆ