ದಾವಣಗೆರೆ: ಅವರು ಅಲ್ಲಿ ಗುಡಿಸಲು ಹಾಕಿಕೊಂಡು 30 ವರ್ಷಗಳಿಂದ ಜೀವನ ಸಾಗಿಸುತ್ತ ಬದುಕು ಕಟ್ಟಿಕೊಂಡವರು. ಬಡವರ ಪಡಿಪಾಟಲು ನೋಡಲಾರದೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು 37 ನಿವೇಶನಗಳನ್ನು ಹಕ್ಕು ಪತ್ರ ಸಮೇತ ನೀಡಿದ್ರು. ಆದ್ರೇ ಇವರಿಗೆ ಪಾಲಿಕೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಎಡವಿದೆ. ಹೇಳಿ ಕೇಳಿ ಇದು ಪಾಲಿಕೆ ವ್ಯಾಪ್ತಿಗೆ ಬರುತ್ತಿದ್ದು, ಈ ವಾರ್ಡ್ ಪಾಲಿಕೆ ಮೇಯರ್ ಅವರ ವಾರ್ಡ್ ಕೂಡ ಹೌದು. ದುರಂತ ಅಂದ್ರೆ ಇಲ್ಲಿ ಮನೆಗಳು ಶೀಟ್ಮಯ, ಚರಂಡಿ ಮೇಲೆ ಸ್ನಾನ, ಬಯಲೇ ಶೌಚಾಲಯ, ದನವಿನ ಓಣಿಯ ಜನರ ಜೀವನ ಅಯೋಮಯ ಎಂಬಂತಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 31ನೇ ವಾರ್ಡ್ನ ದನವಿನ ಓಣಿ (ಎಸ್. ಎಸ್ ಮಲ್ಲಿಕಾರ್ಜುನ್ ನಗರ) ಯಲ್ಲಿ ಮೇಯರ್ ವಾರ್ಡ್‌ನಲ್ಲಿಯೇ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಗುಡಿಸಲುಗಳಿಂದ ರೂಪಾಂತರಗೊಂಡಿರುವ ತಗಡಿನ ಶೆಡ್ಗಳಲ್ಲಿ ವಾಸವಾಗಿವೆ. ಈ ವಾರ್ಡ್ ಬೇರೆಯಾರದ್ದು ಅಲ್ಲ, ಸ್ವತಃ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ ಅವರ 31ನೇ ವಾರ್ಡ್ ಕೂಡ ಹೌದು.
ಇಲ್ಲಿ 37 ಕುಟುಂಬಗಳು ನೆಲೆಸಿದ್ದು, ಇವರನ್ನು ಗುರುತಿಸಿದ ಅಂದಿನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ನಿವೇಶನಗಳನ್ನು ನೀಡಿದ್ದರು. ಈ ಪೈಕಿ ಮೂರು ಕುಟುಂಬಗಳು ಸುಸಜ್ಜಿತ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇನ್ನುಳಿದ 30ಕ್ಕೂ ಹೆಚ್ಚು ಕುಟುಂಬಗಳು ಗೋಡೆಯಂತೆ ತಗಡಿನ ಶೀಟ್ ನಿಲ್ಲಿಸಿ, ಛಾವಣಿಯನ್ನು ತಗಡಿನ ಶೀಟ್‌ಗಳಿಂದ ಮುಚ್ಚಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.
ಈ ಭಾಗದಲ್ಲಿ ಹಮಾಲಿ, ಮನೆಗೆಲಸ ಸೇರಿ ಇತರೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನರೇ ಹೆಚ್ಚಾಗಿ ವಾಸವಾಗಿದ್ದಾರೆ. ಜೋರಾಗಿ ಗಾಳಿ ಬಂದರೆ ಇಡೀ ಶೆಡ್ ಹಾರಿ ಹೋಗುವ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಇನ್ನು, ಇಲ್ಲಿನ ಜನರು ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಮೇಯರ್ ಜಯಮ್ಮ ಗೋಪಿನಾಯ್ಕ್ ಅವರ ವಾರ್ಡ್ ಆಗಿದ್ದರೂ ಕೂಡ ಮೇಯರ್ ಮೇಡಂ ಮಾತ್ರ ಇತ್ತ ತಲೆ ಹಾಕಿ ಮಲಗಿಲ್ಲವಂತೆ ಎಂದು ಕಾರ್ಮಿಕ ಹೋರಾಟಗಾರ ಮುಖಂಡ ವಾಸು ಆಗ್ರಹಿಸಿದರು.
ಬಯಲೇ ಶೌಚಾಲಯ, ಚರಂಡಿ ಮೇಲೆ ಸ್ನಾನ.. ದಾವಣಗೆರೆ ನಗರ ಶೌಚಾಲಯ ಮುಕ್ತವಾಗಿದೆ ಎಂದು ದಾವಣಗೆರೆ ಮಹಾನಗರವು ಬಯಲು ಶೌಚಾಲಯದಿಂದ ಮುಕ್ತಿ ಪಡೆದಿದೆ ಎಂಬುದಾಗಿ ದಾಖಲೆಗಳಲ್ಲಿ ಹೇಳಲಾಗುತ್ತಿದೆ ಅಷ್ಟೆ. ಆದರೆ, ವಾಸ್ತವ ಚಿತ್ರಣವೇ ಬೇರೆ ಇದೆ. ಪಾಲಿಕೆ ಮೇಯರ್ ಜಯಮ್ಮ ಗೋಪಿ ನಾಯ್ಕ ಅವರ ವಾಡ್‌೯ನ ದನವಿನ ಓಣಿ, ಹಳೇ ಚಿಕ್ಕನಹಳ್ಳಿ, ಗೋಶಾಲೆಯ ಒಂದು ಭಾಗದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದ ಕಾರಣ ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಆದ್ದರಿಂದ ಇಲ್ಲಿಯ ನಿವಾಸಿಗಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ.
ಈ ಪ್ರದೇಶಗಳಲ್ಲಿ ವಾಸವಾಗಿರುವ ಮಹಿಳೆಯರು ತಮ್ಮ ದಿನ ನಿತ್ಯದ ಕರ್ಮಗಳನ್ನು ಮುಗಿಸಲು ಬೆಳಕು ಹರಿಯುವ ಮುನ್ನ ಇಲ್ಲವೇ ಸೂರ್ಯ ಮುಳುಗಿದ ಮೇಲೆಯೇ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಪಾಲಿಕೆ ಈ ಭಾಗದ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಡಲು ಕ್ರಮ ಕೈಗೊಳ್ಳಬೇಕು. ಇದಲ್ಲದೆ ಸ್ನಾನ ಕೂಡ ತೆಂಗಿನ ಗರಿಯಿಂದ ನಿರ್ಮಿತ ಚರಂಡಿ ಮೇಲಿರುವ ಬಾತ್ ರೂಮ್‌ನಲ್ಲೇ ಸ್ನಾನ ಮಾಡ್ಬೇಕು ಎಂದು ಸ್ಥಳೀಯ ಹಾಲಮ್ಮ ಹಾಗೂ ತಿಮ್ಮಕ್ಕ ಎಂಬುವರು ಸಂಕಷ್ಟವನ್ನು ತೋಡಿಕೊಂಡರು.
ಕೈಗೆ ಸಿಗದ ಮೇಯರ್ ಜಯಮ್ಮ ಗೋಪಿನಾಯ್ಕ್.. ಹೌದು, 31 ನೇ ವಾರ್ಡಿನ ಪಾಲಿಕೆ ಸದಸ್ಯೆಯಾಗಿ ಮೇಯರ್ ಆಗಿರುವ ಜಯಮ್ಮ ಗೋಪಿನಾಯ್ಕ್ ತಮ್ಮ ವಾರ್ಡಿನತ್ತ ತಲೆಹಾಕಿ ಮಲ್ಗಿಲ್ವಂತೆ. ಸಮಸ್ಯೆಗಳ ಪ್ರತಿಕ್ರಿಯೆಗಾಗಿ ದೂರವಾಣಿ ಕರೆ ಮಾಡಿದ್ರು ಕ್ಯಾರೇ ಎನ್ನದೆ ಅಲ್ಲಿದ್ದೇನೆ ಇಲ್ಲಿದ್ದೇನೆ ಮದುವೆಗೆ ಬಂದಿದ್ದೆ, ಆಸ್ಪತ್ರೆಗೆ ಬಂದಿದ್ದೆ ಎಂದು ಮೇಯರ್ ಅವರ ಬದಲಿಗೆ ಅವರ ಪತಿ ಗೋಪಿನಾಯ್ಕ್ ಪ್ರತಿಕ್ರಿಯೆ ನೀಡಲು ಸಬೂಬು ಹೇಳಿದ್ರು.
ಇನ್ನು, ಸರ್ ಮೇಯರ್ ಅವರಿಗೆ ಫೋನ್ ಕೊಡಿ ಎಂದು ಒತ್ತಾಯಿಸಿದಾಗ ಒಂದು ದಿನದ ಬಳಿಕ ಪೋನ್ ಕರೆಗೆ ಸಿಕ್ಕ ಮೇಯರ್ ಜಯಮ್ಮ ಸಮಸ್ಯೆಗಳಿಗೆ 'ಈಟಿವಿ ಭಾರತ'ಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, ನಾವು ಪ್ರತಿಯೊಂದು ಸೌಲಭ್ಯ ನೀಡಿದ್ದು, ರಸ್ತೆ, ನೀರು, ನೀಡಿದ್ದೇವೆ. ಇನ್ನು ಅವರು ಮನೆ ಕೇಳಿಲ್ಲ. ಅದಕ್ಕೆ ಮನೆ ನೀಡಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ರು.
ವಿದ್ಯುತ್ ಸಂಪರ್ಕ ಇಲ್ಲ.. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮೇಲೆ ಬೀದಿ ದೀಪ ಎನ್ನುವುದು ಕನಸಿನ ಮಾತೆ, ವಿದ್ಯುತ್ ನ್ನು ದೂರದ ಆವರಗೆರೆಯಿಂದ ಲೈನ್ ಎಳೆದುಕೊಳ್ಳಲಾಗಿದ್ದು, ಅದಕ್ಕೂ ಕೆಇಬಿಯವರ ಕಾಟಕ್ಕೆ ಈ ಜನ ರೋಸಿಹೋಗಿದ್ದಾರೆ. ಮತ್ತೊಂದು ಕಡೆ ಚರಂಡಿ ನಿರ್ಮಿಸಲಾಗಿದೆ. ಅದು ಬಾಯಿ ತೆರೆದು ಮಕ್ಕಳ ಬಲಿಗೆ ಕಾಯುತ್ತಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಮುಂದೆ ಹರಿಯದ ಕಾರಣ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಯುಜಿಡಿ ವ್ಯವಸ್ಥೆ ಇಲ್ಲ, ಅರೆಬರೆ ಸಿಸಿ ರಸ್ತೆ ನಿರ್ಮಿಸಿ ಹಾಗೆಯೇ ಬಿಡಲಾಗಿದೆ. ಇನ್ನು, ಗುಂಪು ಗುಂಪಾಗಿ ದಾಂಗುಡಿ ಇರುವ ಹಂದಿ ಸೈನ್ಯದ ಕಾಟದಿಂದ ಜನ ರೋಸಿಹೋಗಿದ್ದಾರೆ. ಒಟ್ಟಾರೆ ನಗರದ ಪ್ರಥಮ ಪ್ರಜೆಯ ವಾರ್ಡಿನ ಗತಿಯೇ ಹೀಗಾದರೆ, ಇನ್ನು ಬೇರೆ ವಾರ್ಡ್‌ಗಳಿಗೆ ಸೌಲಭ್ಯ ಕಲ್ಪಿಸಲು ಹೇಗೆ ಸಾಧ್ಯ ಎಂಬುದು ಈ ಭಾಗದ ನಿವಾಸಿಗಳ ಪ್ರಶ್ನೆಯಾಗಿದೆ.
ಓದಿ: ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ : ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡ ಜನ