ದಾವಣಗೆರೆ: ಅಯೋಧ್ಯೆ ಶ್ರೀರಾಮ ಮಂದಿರದ ಕಾಮಗಾರಿ ಭರದಿಂದ ಸಾಗಿದೆ. 2024ರ ವೇಳೆಗೆ ಭವ್ಯ ಮಂದಿರ ತಲೆ ಎತ್ತಲಿದ್ದು, ಅದೇ ವರ್ಷದ ಜನವರಿಯ ಮಕರ ಸಂಕ್ರಾಂತಿ ವೇಳೆಗೆ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಆಗಲಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಬಿಜೆಪಿಯ ಕೆಲ ಮುಖಂಡರು ರಾಮ ಮಂದಿರಕ್ಕಾಗಿ ಇಪ್ಪತ್ತು ಕೆಜಿಯ ಬೆಳ್ಳಿಯ ಇಟ್ಟಿಗೆ ಸಿದ್ಧಪಡಿಸಿದ್ದಾರೆ.
ಪಿಜೆ ಬಡಾವಣೆಯಲ್ಲಿರುವ ರಾಘವೇಂದ್ರ ಮಠದಲ್ಲಿ ದರ್ಶನಕ್ಕಾಗಿ ಇರಿಸಲಾಗಿದ್ದ ಇಟ್ಟಿಗೆ ರಾಮಮಂದಿರ ನಿರ್ಮಾಣಕ್ಕೆ ಬಳಕೆಯಾಗಲಿದೆ. ಇದಲ್ಲದೆ ಹಿಂದೂ ಸಮಾಜದ ಮುಖಂಡರುಗಳು ಅತಿ ಶೀಘ್ರದಲ್ಲೇ ಪೇಜಾವರ ಶ್ರೀಗಳಿಗೆ ಈ ಇಟ್ಟಿಗೆ ಸಮರ್ಪಿಸಲಿದ್ದು, ಬಳಿಕ ಅಯೋಧ್ಯೆಗೆ ರವಾನೆಯಾಗಲಿದೆ.
ಬೆಳ್ಳಿ ಇಟ್ಟಿಗೆಯ ಮೇಲೆ ಗೋಲಿಬಾರ್ನಲ್ಲಿ ಮೃತಪಟ್ಟ 8 ಹಿಂದೂ ಕಾರ್ಯಕರ್ತರ ಹೆಸರುಗಳನ್ನು ಕೆತ್ತಲಾಗಿದೆ. 1991ರಲ್ಲಿ ದಾವಣಗೆರೆಗೆ ರಾಮರಥ ಯಾತ್ರೆ ಆಗಮಿಸಿತ್ತಂತೆ. ಈ ವೇಳೆ ನಡೆದ ಗಲಭೆಯಲ್ಲಿ ಉಂಟಾದ ಪೊಲೀಸ್ ಗೋಲಿಬಾರ್ನಲ್ಲಿ ಹಿಂದೂ ಮುಖಂಡರು ಮೃತಪಟ್ಟಿದ್ದರು. ಮೃತಪಟ್ಟ ಆ ಕಾರ್ಯಕರ್ತರು ಶ್ರೀರಾಮ ಮಂದಿರ ನಿರ್ಮಾಣದ ಕನಸು ಹೊಂದಿದ್ದರು. ಹೀಗಾಗಿ ಅವರ ಹೆಸರುಗಳನ್ನು ಇಟ್ಟಿಗೆಯಲ್ಲಿ ಕೆತ್ತಲಾಗಿದೆ.
ಇದನ್ನೂ ಓದಿ: ರಾಮನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಣೆ