ದಾವಣಗೆರೆ: ಸಾವನ್ನಪ್ಪಿದವರ ಹಾಗು ಸ್ವಗ್ರಾಮದಿಂದ ಮದುವೆಯಾಗಿ ಬೇರೆ ಗ್ರಾಮಕ್ಕೆ ತೆರಳಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ ಹಣ ಹೊಡೆಯುತ್ತಿದ್ದ ಜಗಳೂರು ತಾಲೂಕಿನ ಅಣಬೂರ ಹಾಗೂ ಹನಮಂತಾಪುರ ಗ್ರಾಮ ಪಂಚಾಯತ್ ಪಿಡಿಒನನ್ನು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೃತರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಕಾರ್ಡ್ ಜೊತೆಗೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಸಾಬೀತಾದ ಬೆನ್ನಲ್ಲೇ ಪಿಡಿಒ ಎ.ಟಿ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ. ಹನಮಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 60 ಲಕ್ಷ ರೂಪಾಯಿ ಸಾಮಗ್ರಿ ಖರೀದಿಯ ಲೆಕ್ಕ ಸೇರಿದಂತೆ 32 ಲಕ್ಷ ರೂಪಾಯಿಗೆ ಲೆಕ್ಕವೇ ಕೊಡದ ಪಿಡಿಒ ನಾಗರಾಜ್ ವಿರುದ್ಧ ಗ್ರಾಮಸ್ಥರು ಹಾಗು ಕೂಲಿಕಾರರು ಕಾರ್ಯನಿರ್ವಹಣಾಧಿಕಾರಿ ಡಾ. ಚೆನ್ನಪ್ಪ ಅವರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಪುತ್ತೂರಿನ ಬಡ ವಿದ್ಯಾರ್ಥಿನಿಗೆ ಸೂರು ಭಾಗ್ಯ ಕಲ್ಪಿಸಿದ ಶಿಕ್ಷಣ ಇಲಾಖೆ.. ಕುಟುಂಬಕ್ಕೆ ಹೊಸಬೆಳಕು
ಪ್ರಕರಣದ ಬಗ್ಗೆ ತನಿಖೆ ಮಾಡಿಸಿದ ಸಿಇಒ ಅವರು ಪಿಡಿಒ ಮೇಲಿರುವ ಆರೋಪ ಸಾಬೀತಾದ ಹಿನ್ನೆಲೆ ಪಿಡಿಒ ನಾಗರಾಜ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದಲ್ಲದೇ ಅಮಾನತಿನ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಪಿಡಿಒಗೆ ಸಿಇಒ ಡಾ. ಚನ್ನಪ್ಪ ಅವರು ತಾಕೀತು ಮಾಡಿದ್ದಾರೆ.