ದಾವಣಗೆರೆ: ಮುಂಗಾರುಪೂರ್ವ ಮಳೆ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಅಕಾಲಿಕ ಮಳೆಯ ಪರಿಣಾಮ ಭತ್ತದ ಪೈರು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ಸತತ ಮೂರು ದಿನಗಳ ಕಾಲ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಭತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಮಳೆ ನಿಂತ ಮೇಲೂ ಕೂಡ ರೈತರಿಗೆ ಸಂಕಷ್ಟಗಳು ತಪ್ಪಿಲ್ಲ. ಹರಿಹರ ತಾಲೂಕಿನ ಸತ್ಯನಾರಾಯಣಪುರದಲ್ಲಿ 2,500ಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತ ನಾಶವಾಗಿದೆ. ನೆಲಕ್ಕೆ ಬಿದ್ದ ಭತ್ತ ಗದ್ದೆಯಲ್ಲೇ ಮೊಳಕೆಯೊಡೆಯುತ್ತಿವೆ.
ಗ್ರಾಮದ ರೈತ ಸತ್ಯನಾರಾಯಣ ಎಂಬುವವರು ಗುತ್ತಿಗೆ ಪಡೆದ ಮೂರು ಎಕರೆಯಲ್ಲಿ 30 ಸಾವಿರ ರೂ. ವ್ಯಯಿಸಿ ಭತ್ತ ಬೆಳೆದಿದ್ದರಂತೆ. ಆದ್ರೀಗ ಭತ್ತದ ಪೈರಿನಲ್ಲಿ ಮೊಳಕೆ ಬಂದಿದೆ. ನೆಲಕ್ಕೆ ಬಿದ್ದ ಭತ್ತವನ್ನು ಯಾರೂ ಕೂಳ್ಳುವುದಿಲ್ಲ, ಅದು ಉಪಯೋಗಕ್ಕೂ ಬರುವುದಿಲ್ಲ ಎಂಬುದು ಅವರ ಅಳಲು.
ಇದನ್ನೂ ಓದಿ: 'ಸಾರ್ವಜನಿಕರ ಹಣ ಲೂಟಿ ಮಾಡಿ ಬಿಜೆಪಿಯವರು ಹೇಗೆ ರಾತ್ರಿ ನಿದ್ದೆ ಮಾಡ್ತಾರೆ?'
ಸತ್ಯನಾರಾಯಣಪುರ ಕ್ಯಾಂಪ್ನ ಹಲವು ಜಮೀನುಗಳಲ್ಲಿ ನೆಲಕ್ಕೆ ಬಿದ್ದ ಭತ್ತ ಮೊಳಕೆಯೊಡೆದು ಸಸಿಯಾಗಿವೆ. 180ಕ್ಕೂ ಹೆಚ್ಚು ಚೀಲಗಳಷ್ಟು ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ 50 ಚೀಲ ಭತ್ತ ಸಿಗುವುದು ಕೂಡಾ ಅನುಮಾನವಂತೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಮಾತ್ರ ರೈತ ಸುಧಾರಿಸಿಕೊಳ್ಳುತ್ತಾನೆ, ಇಲ್ಲವಾದ್ರೆ ವಿಷ ಸೇವಿಸಿ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಸಮಾಧಾನ ಇಲ್ಲಿನ ರೈತರದ್ದು.