ದಾವಣಗೆರೆ: ಮಾಜಿ ಸಚಿವ ಪಿ. ಟಿ. ಪರಮೇಶ್ವರ್ ನಾಯ್ಕ, ಅವರ ಪುತ್ರ ಹಾಗೂ ಬೆಂಬಲಿಗರು ರೈತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹರಪನಹಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಕಲ್ಲು ಗಣಿಗಾರಿಕೆ ವಿಚಾರವಾಗಿ ಪ್ರಶ್ನಿಸಿದ ರೈತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗಲಾಟೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಕಲ್ಲು ಗಣಿಗಾರಿಕೆಯಿಂದ ತಮ್ಮ ಜಮೀನಿಗೆ ತೊಂದರೆಯಾಗುತ್ತಿದೆ. ನಮಗೆ ಧೂಳಿನಿಂದ ಭಾರಿ ಸಮಸ್ಯೆಯಾಗಿತ್ತು ಎಂದು ಹೇಳಿದ ಕಾರಣ ಉಪವಿಭಾಗಾಧಿಕಾರಿಗಳನ್ನು ಪರಿಶೀಲನೆಗೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಇದೇ ಮಾರ್ಗದಲ್ಲಿ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಕಾರಿನಲ್ಲಿ ಹೋಗುವಾಗ ಧೂಳು ಬಂದ ಕಾರಣ ರೈತರು ಆಕ್ಷೇಪಿಸಿದ್ದಾರೆ. ಆಗ ಪರಮೇಶ್ವರ್ ನಾಯ್ಕ್ ಬೆಂಬಲಿಗರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಆಗ ಕಾರಿನಿಂದ ಇಳಿದು ಬಂದ ಪರಮೇಶ್ಚರ್ ನಾಯ್ಕ, ಅವರ ಪುತ್ರ ಸಹ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಗಾಯಾಳುಗಳ ಆರೋಪವಾಗಿದೆ. ಹರಪನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ರೈತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.