ದಾವಣಗೆರೆ: ಆಹಾರ ಕಿಟ್ ನೀಡುತ್ತೇವೆ ಎಂದು ಹೇಳಿ ಆರ್ಕೆಸ್ಟ್ರಾ ಕಲಾವಿದರನ್ನು ಬಿಸಿಲಿನಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಸುಡು ಬಿಸಿಲಿನಲ್ಲಿ ಕಾಯಿಸಿದ ಘಟನೆ ನಗರದ ವಿದ್ಯಾನಗರದ ಕಾಫಿ ಡೇ ಬಳಿ ನಡೆದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಕಲಾವಿದರು ಒಳಗಾಗಿದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುತ್ತದ್ದಾರೆ. ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಆರ್ಕೆಸ್ಟ್ರಾ ಕಲಾವಿದರ ಸಂಘದ ಸದಸ್ಯರಿಗೆ ಕಿಟ್ ವಿತರಿಸುವುದಾಗಿ ಇಲ್ಲಿಗೆ ಬರುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಲಾವಿದರು ಸಾಮಾಜಿಕ ಅಂತರ ಕಾಯ್ದುಕೊಂಡು ಗಂಟೆಯಿಂದಲೇ ಬಿಸಿಲಿನ ಶಾಖ ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತಿದ್ದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಇತರರು ಆಗಮಿಸಿದರು.
ಬಿಸಿಲು ಇದ್ದ ಕಾರಣ ಡಿಸಿ ನೆರಳಿನಲ್ಲಿ ನಿಂತಿದ್ದರು. ದಾವಣಗೆರೆ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ್ ಆಗಮಿಸಿದ ಮೇಲೆ ಕಿಟ್ ವಿತರಿಸುವುದಾಗಿ ಹೇಳಿದ್ದರಿಂದ ಕಾಯಲೇಬೇಕಾಯಿತು. ಒಂದೂವರೆ ಗಂಟೆ ಬಳಿಕ ಸಿದ್ದೇಶ್ವರ್ ಆಗಮಿಸಿದ ಬಳಿಕ ಕಿಟ್ ವಿತರಿಸಲಾಯಿತು. ಕಷ್ಟದಲ್ಲಿರುವವರಿಗೆ ನೆರವು ನೀಡಿದಾಗಿ ಹೇಳಿ ಈ ರೀತಿ ಮಾಡಿದ ಆಯೋಜಕರಿಗೆ ಕಲಾವಿದರು ಮನಸ್ಸಿನಲ್ಲಿಯೇ ಹಿಡಿಶಾಪ ಹಾಕಿ ಕಿಟ್ ತೆಗೆದುಕೊಂಡು ಹೋದರು.