ಹರಿಹರ (ದಾವಣಗೆರೆ) : ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಡಳಿತದ ಆದೇಶದಂತೆ ಕೋಳಿಗಳನ್ನು ನಾಶಪಡಿಸಲು ಬಂದಿದ್ದ ಅಧಿಕಾರಿಗಳ ಎದುರು ಮಕ್ಕಳಂತೆ ಸಾಕಿಕೊಂಡಿದ್ದ ಕೋಳಿಗಳನ್ನು ಕೊಲ್ಲದಂತೆ ವೃದ್ಧೆಯೋರ್ವರು ಗೋಳಾಡಿದ ಘಟನೆ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆಯಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೋಳಿಗಳನ್ನು ನಾಶಪಡಿಸಲು ಜಿಲ್ಲಾಡಳಿತವು ಕಿಲ್ಲಿಂಗ್ ಆರ್ಡರ್ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದಲ್ಲಿನ ಕೋಳಿ ಹಾಗೂ ಸಾಕು ಪಕ್ಷಿಗಳನ್ನು ಹಿಡಿದು ನಾಶಪಡಿಸಿ, ಗುಂಡಿಯಲ್ಲಿ ಹಾಕಿ ಮುಚ್ಚುವ ಕಾರ್ಯ ಕೈಗೊಂಡರು.
ಈ ವೇಳೆ ಗ್ರಾಮದ ಸೀತಮ್ಮ ಎಂಬ ವೃದ್ಧೆ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಹೋಗಬೇಡಿ, ಕೋಳಿಗಳನ್ನು ಮಕ್ಕಂತೆ ಸಾಕಿದ್ದೇನೆ, ದಮ್ಮಯ್ಯ ಎನ್ನುತ್ತೇನೆ. ನನ್ ಕೋಳಿ ಬಿಡ್ರಪ್ಪ, ಕೋಳಿ ಬದಲು ನನ್ನನ್ನು ಸಾಯಿಸಿ ಎಂದು ವೃದ್ದೆ ಗೋಳಾಡಿದ್ರು.
ಮಹಾಮಾರಿ ಕೊರೊನಾ ವೈರಸ್ ದೇಶದ ಹಲವೆಡೆಗಳಲ್ಲಿ ಪತ್ತೆಯಾದ ಬೆನ್ನಲ್ಲೇ, ಹಕ್ಕಿಜ್ವರವೂ ಶುರುವಾಗಿದ್ದು, ದಾವಣಗೆರೆ ಜಿಲ್ಲಾಡಳಿತವು ಕಲ್ಲಿಂಗ್ ಆರ್ಡರ್ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ.