ದಾವಣಗೆರೆ: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಾನೇ ಇರ್ತಾರೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕೂ ಗಮನ ಸೆಳೆಯುತ್ತಾರೆ. ಈಗ ಆಗಿರುವುದೂ ಅದೇ.
ಹೌದು, ರೇಣುಕಾಚಾರ್ಯ ತೆಪ್ಪ ಓಡಿಸಿದ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಟ್ರೋಲಿಗರು ಸಹ ಸಖತ್ತಾಗಿಯೇ ಕಾಮಿಡಿ ಮಾಡತೊಡಗಿದ್ದಾರೆ.
ಕೆಲವರಂತೂ ಮೊಣಕಾಲುದ್ದ ನೀರಿಲ್ಲ. ಆದ್ರೂ, ರೇಣುಕಾಚಾರ್ಯ ತೆಪ್ಪ ಓಡಿಸಿ ಪ್ರವಾಹದ ವೇಳೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. ಮತ್ತೆ ಕೆಲವರಂತೂ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಹೀಯಾಳಿಸತೊಡಗಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ತಾಗಿಯೇ ವೈರಲ್ ಆಗಿದೆ.
ತುಂಗಭದ್ರಾ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು, ಕೋಟಿ ಮಲ್ಲೂರು ಗ್ರಾಮದಲ್ಲಿ ಪ್ರವಾಹ ತಲೆದೋರಿತ್ತು. ಈ ವೇಳೆ, ತೆಪ್ಪದಲ್ಲಿ ಹೋಗಿ ಜನರಿಗೆ ಸಾಂತ್ವನ ಹೇಳಿ ಬಂದಿದ್ದರು. ಆದ್ರೆ, ದಡಕ್ಕೆ ಬರುವಾಗ ರೇಣುಕಾಚಾರ್ಯ ತೆಪ್ಪ ಓಡಿಸುವಾಗ ಮೊಣಕಾಲುದ್ದದಷ್ಟು ನೀರಿರಲಿಲ್ಲ. ಜನರು ನೀರಿಗಿಳಿದು ತೆಪ್ಪ ಎಳೆದುಕೊಂಡು ಬಂದದ್ದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು. ಇದರಿಂದ ನೆಟ್ಟಿಗರು ಶಾಸಕ ರೇಣುಕಾಚಾರ್ಯ ಅವರನ್ನು ಕಿಚಾಯಿಸಿದ್ದಾರೆ.