ದಾವಣಗೆರೆ : ಮಕ್ಕಳಾಗಲಿಲ್ಲ ಎಂಬ ಕೊರಗು ಸಾಕಷ್ಟು ಜನರ ಜೀವನವನ್ನೇ ಬಲಿ ಪಡೆದಿರುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಮನುಕುಲವನ್ನು ತಲೆ ತಗ್ಗಿಸುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಮಟ್ಟಿ ಗ್ರಾಮದ ಹೊರವಲಯದ ಮುಳ್ಳಿನ ಕಂಟಿಯಲ್ಲಿ ನವಜಾತ ಹೆಣ್ಣು ಶಿಶುವನ್ನು ದುರುಳರು ಎಸೆದು ಹೋಗಿರುವ ಅಮಾನವೀಯ ಕೃತ್ಯ ನಡೆದಿದೆ.
ಮುಳ್ಳಿನ ಕಂಟಿಯಲ್ಲಿ ಪತ್ತೆಯಾದ ನವಜಾತ ಶಿಶು ಸಾವನಪ್ಪಿದ್ದು, ಅಕ್ರಮ ಸಂಬಂಧ ಅಥವಾ ಹೆಣ್ಣು ಮಗು ಜನಿಸಿದ್ದಕ್ಕಾಗಿ ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಇನ್ನು ಸ್ಥಳಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ವರ್ಗ ಪರಿಶೀಲನೆ ನಡೆಸಿದೆ. ಇದಲ್ಲದೇ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಪೊದೆಯಲ್ಲಿ ಎಸದಿದ್ದ ನವಜಾತ ಶಿಶು ರಕ್ಷಣೆ (ಬೆಂಗಳೂರು) : ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾಡುಬ್ಯಾಡರಹಳ್ಳಿಯಲ್ಲಿ ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಿಶುವನ್ನು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಾಡುಬ್ಯಾಡರಹಳ್ಳಿಯಲ್ಲಿ ಮನೆಗಳ ಸಂದಿ ಮಧ್ಯದಲ್ಲಿ ಬೆಳೆದಿದ್ದ ಹೂವಿನ ಗಿಡದ ಪೊದೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದರು. ಈ ಶಿಶುವನ್ನು ಇರುವೆಗಳು ಮುತ್ತಿಕೊಂಡಿದ್ದವು. ಬಳಿಕ ಇರುವೆಗಳಿಂದ ರಕ್ಷಣೆ ಮಾಡಿದ ಸ್ಥಳೀಯರು ಮನೆಗೆ ತಂದು ಆರೈಕೆ ಮಾಡಿ, ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.
ಇನ್ನೊಂದೆಡೆ ರಾಜ್ಯದಲ್ಲೆ ಕೊಪ್ಪಳ ಜಿಲ್ಲಾದ್ಯಂತ ಕಳೆದೊಂದು ವರ್ಷದಲ್ಲಿ ಒಟ್ಟು 6 ನವಜಾತ ಶಿಶುಗಳು ಪತ್ತೆಯಾಗಿವೆ. ಅದರಲ್ಲಿ ಮೂರು ನವಜಾತ ಶಿಶುಗಳು ಮೃತಪಟ್ಟಿದ್ದು, ಇನ್ನುಳಿದ ಮೂರು ಶಿಶುಗಳು ಜೀವಂತವಾಗಿ ಪತ್ತೆಯಾಗಿದ್ದವು. ಈ ಎಲ್ಲ ಶಿಶುಗಳು ಯಲಬುರ್ಗಾ ತಾಲೂಕಿನ ಬೇವೂರು, ತಾವರಗೇರ, ಗಂಗಾವತಿ ತಾಲೂಕಿನ ಮರಳಿ, ಕೊಪ್ಪಳ ಜಿಲ್ಲಾಸ್ಪತ್ರೆ ಸೇರಿದಂತೆ ಚರಂಡಿ, ಪೊದೆ, ಶೌಚಾಲಯದಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ : ಕೊಪ್ಪಳದ ಚರಂಡಿಯಲ್ಲಿ ನವಜಾತ ಗಂಡು ಶಿಶು ಪತ್ತೆ: ಎಸೆದವರ ಪತ್ತೆಗೆ ಪೊಲೀಸರ ಶೋಧನೆ ..