ದಾವಣಗೆರೆ: ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳ ದೇವರ ದರ್ಶನಕ್ಕೆ 65 ವರ್ಷ ಮೇಲ್ಪಟ್ಟ ಹಿರಿಯರಿಗೆ ನೇರ ದರ್ಶನಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಅದರೆ, ಜಿಲ್ಲೆಯ ಕೆಲ ಹಿರಿಯ ನಾಗರೀಕರು 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಬದಲಾಗಿ ಕನಿಷ್ಠ 50 ರಿಂದ 55 ವರ್ಷ ಮೇಲ್ಪಟ್ಟ ಹಿರಿಯರಿಗೆ ದೇವರ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ದೇವಸ್ಥಾನಗಳಲ್ಲಿ ಹಿರಿಯ ನಾಗರೀಕರು ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಂತು ಕಾಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಕ್ರಮ ಒಪ್ಪಿಕೊಳ್ಳುವಂತಹದ್ದು. ಆದರೆ, ಈ ವಯಸ್ಸಿನ ಮಿತಿಯನ್ನು ಸ್ವಲ್ಪ ಇಳಿಕೆ ಮಾಡುವಂತೆ ಸ್ಥಳೀಯರು ಒತ್ತಾಯದ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
65 ವರ್ಷ ಮೇಲ್ಪಟ್ಟವರಿಗೆ ನೇರ ದೇವರ ದರ್ಶನ ಸೌಲಭ್ಯ ಕಲ್ಪಿಸುವಂತೆ ದೇವಸ್ಥಾನಗಳಿಗೆ ಆದೇಶ ಹೊರಡಿಸಿದ ಸರ್ಕಾರದ ಕ್ರಮದ ಕುರಿತ ಮಾತನಾಡಿದ ಹಿರಿಯ ಹೋರಾಟಗಾರ್ತಿ ಜೀವಿ ಶಾರದಮ್ಮ, ''ಈ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ. ಅದರೆ, 65 ವರ್ಷ ಮೇಲ್ಪಟ್ಟವರಿಗೆ ಬದಲಾಗಿ 50 ವರ್ಷದವರಿಗೆ ಅವಕಾಶ ಕಲ್ಪಸಿದರೆ ಇನ್ನೂ ಉತ್ತಮವಾಗಿರುತ್ತಿತ್ತು. ಕಾರಣ 50 ವರ್ಷ ಮೇಲ್ಪಟ್ಟವರು ಸಾಕಷ್ಟು ರೋಗಗಳಿಗೆ ತುತ್ತಾಗಿರುತ್ತಾರೆ. 65 ವರ್ಷದ ಹಿರಿಯರು ಈಗಾಗಲೇ ಮನೆಬಿಟ್ಟು ಹೊರಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ. ಐವತ್ತು ವರ್ಷದವರು ಸ್ವಲ್ಪ ಮಟ್ಟಿಗೆ ಆರೋಗ್ಯವಾಗಿರುತ್ತಾರೆ. ಅದ್ದರಿಂದ ಮುಜರಾಯಿ ದೇವಾಲಯಗಳ ದೇವರ ದರ್ಶನಕ್ಕೆ 55 ವರ್ಷ ಮೇಲ್ಪಟ್ಟ ಹಿರಿಯರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಅಲ್ಲದೇ ಸರ್ಕಾರ ತತಕ್ಷಣ ಜಾರಿಗೆ ತಂದರೆ ನೂರಾರು ಹಿರಿಯರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ'' ಎಂದು ಶಾರದಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೋರ್ವ ಹೋರಾಟಗಾರ ವಾಸು ಎನ್ನುವವರು ಮಾತನಾಡಿ, ''ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶ ಸಂತಸ ತಂದಿದೆ. ನೇರ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಡಿರುವುದು ಖುಷಿ ವಿಚಾರವೇ. ಅದರೆ, 55 ವರ್ಷದ ಮೇಲ್ಪಟ್ಟ ಹಿರಿಯರಿಗೆ ಅವಕಾಶ ಕಲ್ಪಿಸಿದರೆ ಇನ್ನೂ ಸೂಕ್ತ. ಏಕೆಂದರೆ ಇವತ್ತಿನ ಹೈಬ್ರಿಡ್ ಆಹಾರ, ಇತ್ತೀಚೆಗೆ ಬಿಪಿ. ಶುಗರ್, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಹೆಚ್ಚಾಗಿವೆ. 40 ರಿಂದ 50 ವರ್ಷ ಅನ್ನುವಷ್ಟರಲ್ಲಿ ಈ ರೋಗಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಹಾಗಾಗಿ 55 ವರ್ಷ ಮೇಲ್ಪಟ್ಟ ಹಿರಿಯರಿಗೆ ದೇವರ ನೇರ ದರ್ಶನಕ್ಕೆ ಅವಕಾಶ ಕೊಟ್ಟರೆ ಸೂಕ್ತ. ಕಾರಣ ಮನುಷ್ಯ ಬದುಕುವುದೇ 65-70 ಆಸು-ಪಾಸು. ಪ್ರಸ್ತುತ ದಿನಗಳಲ್ಲಿ 65 ವರ್ಷದ ತನಕ ಬದುಕುವುದು ಕಷ್ಟ ಸಾಧ್ಯ. ಅದಕ್ಕೆ ರಾಜ್ಯ ಸರ್ಕಾರ 65ರ ಬದಲಾಗಿ 55 ವರ್ಷಕ್ಕೆ ನಿಗದಿ ಮಾಡಬೇಕು. ಇದರಿಂದ ಸಾಕಷ್ಟು ಜನ ಹಿರಿಯರು ದೇವಾಲಯದಲ್ಲಿ ದೇವರ ದರ್ಶನಕ್ಕೆ ಸರಥಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ'' ಎಂದು ವಾಸು ತಮ್ಮ ಅಭಿಪ್ರಾಯದ ಜೊತೆಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ನೇರ ದರ್ಶನ ವ್ಯವಸ್ಥೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ತಿರುಪತಿ - ತಿರುಮಲದ ಮಾದರಿಯಂತೆ ಇನ್ನು ಮುಂದೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಅಗತ್ಯವಿಲ್ಲ. ನೇರವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹಿರಿಯ ನಾಗರೀಕರ ಬಹುದಿನಗಳ ಬೇಡಿಕೆಯಂತೆ 65 ವರ್ಷಕ್ಕಿಂತ ಮೇಲ್ಪಟ್ಟವರು ಎ ಹಾಗೂ ಬಿ ಶ್ರೇಣಿಯ ದೇವಸ್ಥಾನಗಳಲ್ಲಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿದೆ.