ದಾವಣಗೆರೆ : ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನಲ್ಲಿರಲಿ ಬಿಡಲಿ ಮುಸಲ್ಮಾನರು ಕಾಂಗ್ರೆಸ್ಗೆಯೇ ಮತ ಹಾಕುವುದು. ಕಾಂಗ್ರೆಸ್ ಎಂದರೆ ಮುಸ್ಲಿಂ, ಬಿಜೆಪಿ ಅಂದ್ರೆ ಹಿಂದೂ ಎಂಬಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜಕೀಯ ಪಕ್ಷಗಳ ಶಕ್ತಿಯಾದ ಜಾತಿ ವ್ಯವಸ್ಥೆ ಬಗ್ಗೆ ಈ ರೀತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಕ್ಕಲಿಗ ಜಾತಿ ಮತ ಸೆಳೆಯಲು ಪ್ರಯತ್ನಿಸುತ್ತಾರೆ. ಸಿದ್ದರಾಮಯ್ಯನವರ ಹಿಂದೆ ಕುರುಬರನ್ನು ಬಿಟ್ಟರೆ ಯಾವ ಅಹಿಂದದವರೂ ಇಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ನಾಯಕರು ಜಾತಿ ಬಳಸಿಕೊಳ್ಳುತ್ತಿದ್ದು, ನಾನು ಇದನ್ನು ಕಟುವಾಗಿ ವಿರೋಧಿಸುತ್ತೇನೆ. ಇವರೆಲ್ಲಾ ಅವರವರ ಜಾತಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದರು.
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ದೊರಕಿಸಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ನೇತೃತ್ವ ವಹಿಸಿ ಎಂದು ಕಾಗಿನೆಲೆ ಶ್ರೀಗಳು ಹಾಗೂ ಕುರುಬ ಸಮಾಜದ ಮುಖಂಡರು ಮನೆಗೆ ಬಂದು ಮನವಿ ಮಾಡಿದ್ದಾರೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ? ಹಿಂದಿನಿಂದಲೂ ಈ ಫೈಲು ದೆಹಲಿಯಿಂದ ಇಲ್ಲಿಗೆ, ಇಲ್ಲಿಂದ ದೆಹಲಿಗೆ ಹೋಗಿ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೊಂಡಿಯಾಗಿ ಕೆಲಸ ಮಾಡಬೇಕೆಂಬ ಅಪೇಕ್ಷೆ ಇಟ್ಟುಕೊಂಡು ಕರೆದಿದ್ದಾರೆ. ಕೇವಲ ಕುರುಬ ಸಮಾಜ ಮಾತ್ರವಲ್ಲ, ಉಪ್ಪಾರ ಸಮಾಜದ ಶ್ರೀಗಳು, ಸವಿತಾ ಹಾಗೂ ಕೋಳಿ ಸಮುದಾಯದವರು ನೇತೃತ್ವ ವಹಿಸುವಂತೆ ಮನವಿ ಮಾಡಿದ್ದಾರೆ. ಅರ್ಹ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು.
ಸಚಿವರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆಡಳಿತಾತ್ಮಕ ವಿಚಾರದ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸುಧಾಕರ್ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯು ದೊಡ್ಡದು. ಸಾಮಾಜಿಕ ನ್ಯಾಯ ಕೊಡಿಸಲು ಶ್ರೀರಾಮುಲು ಸೂಕ್ತ ಎಂಬ ಕಾರಣಕ್ಕೆ ಈ ಖಾತೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಸಿಎಂ ಅವರದ್ದೇ ಪರಮಾಧಿಕಾರ. ಕೇಂದ್ರ ಹಾಗೂ ರಾಜ್ಯ ನಾಕಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. 17 ಶಾಸಕರು ರಾಜೀನಾಮೆ ನೀಡಿ ಪಕ್ಷಕ್ಕೆ ಬಂದ ಕಾರಣ ಅವರಿಗೂ ಸ್ಥಾನಮಾನ ಕೊಡಬೇಕು. ಹಾಗಾಗಿ ವಿಸ್ತರಣೆ ತಡವಾಗುತ್ತಿದೆ. ಇಲ್ಲದಿದ್ದರೆ ಯಾವಾಗಲೋ ಆಗುತಿತ್ತು. ಈ ಜಿಲ್ಲೆಗೆ ಸಚಿವ ಸ್ಥಾನ ನೀಡುವುದು ಸಿಎಂ ಅವರ ವಿವೇಚನೆಗೆ ಬಿಟ್ಟದ್ದು. ಅವರೇ ಅಂತಿಮ ನಿರ್ಣಾಯಕರು ಎಂದರು.