ದಾವಣಗೆರೆ: ಈಶ್ವರಪ್ಪ ಹೇಳಿದ ತಕ್ಷಣ ಮುರುಗೇಶ್ ನಿರಾಣಿಯವರು ಸಿಎಂ ಆಗಲ್ಲ. ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಆಯ್ಕೆ ಮಾಡೋರು ಈಶ್ವರಪ್ಪನೂ ಅಲ್ಲ, ನಾನೂ ಅಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆ ಬಳಿಕ ಮಾತನಾಡಿದ ಅವರು, ಚುನಾವಣೆ ಬಳಿಕ ಶಾಸಕರು ಹಾಗೂ ಹೈಕಮಾಂಡ್ ಒಬ್ಬರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಬದಲಾಗಿ ನಾನು ಅಥವಾ ಈಶ್ವರಪ್ಪ ಸಿಎಂ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದರು.
ಯಾರ ಹಣೆಬರಹ ಚೆನ್ನಾಗಿದೆಯೋ ಅವರು ಮುಖ್ಯಮಂತ್ರಿಯಾಗುತ್ತಾರೆ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಇನ್ನೂ ಎರಡು ವರ್ಷಗಳ ಕಾಲ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ. ಈಶ್ವರಪ್ಪನವರೇ ಇದರ ಬಗ್ಗೆ ಗೊಂದಲ ಸೃಷ್ಟಿ ಮಾಡಿದ್ದು, ಅವರೇನು ಹೈಕಮಾಂಡ್ ಅಲ್ಲ, ಅವರು ಮಾತನಾಡುವ ವೇಳೆ ಯೋಚನೆ ಮಾಡಿ ಮಾತಾಡಬೇಕಾಗುತ್ತದೆ ಎಂದು ಸ್ವಪಕ್ಷದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಹೊಸಹಳ್ಳಿಯಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಮನೆಯ ವಿದ್ಯುತ್ ಕಟ್:
ಲಸಿಕೆ ಹಾಕಿಸಿಕೊಳ್ಳದ 10ಕ್ಕೂ ಹೆಚ್ಚು ಮನೆ ಮಾಲೀಕರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಸದ ಸಿದ್ದೇಶ್ವರ್ ಪ್ರತಿಕ್ರಿಯಿಸಿ ಲಸಿಕೆ ಹಾಕಿಸಿಕೊಳ್ಳದ ಬೆನ್ನಲ್ಲೇ ತಿಳಿವಳಿಕೆ ಹೇಳಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ. ಲಸಿಕೆ ಹಾಕಿಸಿಕೊಂಡವರು ಯಾರೂ ಸಾಯಲ್ಲ, ನಾನು ಕೂಡ ಎರಡು ಲಸಿಕೆ ಹಾಕಿಸಿಕೊಂಡಿದ್ದೇನೆ ಏನೂ ಆಗಿಲ್ಲ, ನೀವು ಕೂಡ ಲಸಿಕೆ ಹಾಕಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಮನೆ ಬಾಗಿಲು ಮುಚ್ಚಿದೆ: ಕುಮಾರಸ್ವಾಮಿ