ದಾವಣಗೆರೆ: ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಮರಳು ತುಂಬಿದ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದ ದಿವ್ಯಾ ಪಾಟೀಲ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮನೆಗೆ ಬರುತ್ತಿದ್ದಂತೆ ಮೃತ ವಿದ್ಯಾರ್ಥಿನಿಯ ಪೋಷಕರ ದುಃಖಿತರಾದರು. ಮಗಳನ್ನು ಕಳೆದುಕೊಂಡ ನಮಗೆ ಇನ್ನು ಯಾರು ದಿಕ್ಕು ಎಂದು ಕಣ್ಣೀರು ಹಾಕಿದ್ರು. ಅಲ್ಲದೇ ಈ ರಸ್ತೆಯಲ್ಲಿ ಮರಳು ಸಾಗಣೆ ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಬೇಕು. ನಮಗೆ ಆದ ಅನ್ಯಾಯ ಮುಂದೆ ಯಾರಿಗೂ ಆಗಬಾರದು ಎಂದು ಆಕೆ ಕುಟುಂಬಸ್ಥರು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ವಿದ್ಯಾರ್ಥಿನಿ ಸಾವು ನನಗೂ ದುಃಖ ತಂದಿದೆ. ಹೋದ ಜೀವ ಮತ್ತೆ ತಂದುಕೊಡುವುದಕ್ಕೆ ಆಗಲ್ಲ. ಮೃತಳ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದರು. ಆಗ ಇನ್ನು ಹೆಚ್ಚಿನ ಪರಿಹಾರ ನೀಡಬೇಕೆಂಬ ಬೇಡಿಕೆ ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ವಿದ್ಯಾರ್ಥಿನಿ ಸಾವಿನ ಬಳಿಕ ಲಾರಿಗಳಿಗೆ ಕಲ್ಲು ತೂರಿದ್ದು, ಬೆಂಕಿ ಹಚ್ಚಿದ್ದು ತಪ್ಪು ಎಂದು ಹೇಳಲು ಆಗಲ್ಲ. ಪೊಲೀಸರು ಪ್ರಕರಣ ದಾಖಲಿಸಿದ್ದು, ಅವ್ರು ತೆಗೆಯುವುದಕ್ಕೆ ಆಗಲ್ಲ. ಸಿಎಂ ಯಡಿಯೂರಪ್ಪರ ಜೊತೆ ಮಾತನಾಡಿ ಸಚಿವ ಸಂಪುಟದಲ್ಲಿ ಕೇಸ್ ವಾಪಸ್ ತೆಗೆಸುತ್ತೇನೆ. ಇದು ನನ್ನ ಜವಾಬ್ದಾರಿ. ವಿದ್ಯಾರ್ಥಿನಿ ಸಾವನ್ನಪ್ಪಿದ ದಿನದಂದು ಮಾಜಿ ಶಾಸಕರು ರಾಜಕಾರಣ ಮಾಡಿದ್ದಾರೆ. ಸಾವಿನಲ್ಲಿ ಯಾರೂ ರಾಜಕೀಯ ಮಾಡಬಾರದು. ಅವರಿದ್ದ ಕಾಲದಲ್ಲಿ ಟೆಂಡರ್ ಆಗಿದ್ದು, ನನ್ನ ಕಾಲದಲ್ಲಿ ಅಲ್ಲ. ವಿನಾಕಾರಣ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಎಲ್ಲವನ್ನೂ ದೇವರು ನೋಡಿಕೊಳ್ಳಲಿ ಎಂದು ಹೇಳಿದರು.