ದಾವಣಗೆರೆ: ಕೊರೊನಾದಿಂದ ಬಚಾವಾಗಲು ಮಾಸ್ಕ್ ಧರಿಸುವುದು ಕಡ್ಡಾಯ. ಹಲವು ವಿಚಾರಗಳಿಂದ ಟ್ರೆಂಡ್ನಲ್ಲಿರುವ ಪ್ರಧಾನಿ ಮೋದಿ ಧರಿಸಿದ ಆ ಒಂದು ಮಾಸ್ಕ್ ಈಗ ಎಲ್ಲೆಡೆ ಸುದ್ದಿಯಲ್ಲಿದೆ. ಬೆಣ್ಣೆನಗರಿಯ ಕುಟುಂಬವೊಂದು ಇದೇ ಮಾಸ್ಕ್ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಧರಿಸಿದ ಆ ಮಾಸ್ಕ್ ಅನ್ನು ಇದೇ ಕುಟುಂಬವೇ ತಯಾರಿಸಿದೆ ಎಂಬುದು ವಿಶೇಷ.
ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನ ಕುವೆಂಪು ಬಡಾವಣೆಯ ನಿವಾಸಿಯಾದ ಕೆ.ಪಿ. ವಿವೇಕಾನಂದ ಕಾಕೋಳ್ ಕುಟುಂಬ ತಯಾರಿಸಿ ಕಳುಹಿಸಿದ್ದ ಮಾಸ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದಾರೆ. ಪ್ರಧಾನಿ ಮಾಸ್ಕ್ ಧರಿಸಿದ ಫೋಟೋ ಕೂಡ ಕುಟುಂಬದ ಕೈ ಸೇರಿದ್ದು, ಕುಟುಂಬದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಕೊರೊನಾ ಸೋಂಕು ಕಾಣಿಸಿಕೊಂಡು ಲಾಕ್ ಡೌನ್ ಹೇರಿದ ಬಳಿಕ ವಿವೇಕಾನಂದ ಕುಟುಂಬ ಮಾಸ್ಕ್ ಅನ್ನು ತಯಾರಿಸಿ ಬಡವರು, ಆಟೋ ಚಾಲಕರು, ನಿರ್ಗತಿಕರು ಸೇರಿದಂತೆ ಅಸಹಾಯಕರಿಗೆ ಉಚಿತವಾಗಿ ನೀಡಿದ್ದರು. ಗುಣಮಟ್ಟದ ಕಾಟನ್ ಬಟ್ಟೆ ಬಳಸಿ ರೂಪಿಸಲಾಗಿರುವ ಈ ಮಾಸ್ಕ್ ಗಳು ಸಣ್ಣ ಮಕ್ಕಳು, ಮಹಿಳೆಯರಿಂದ ಹಿಡಿದು ವಯೋವೃದ್ಧರು ಧರಿಸಲು ಯೋಗ್ಯವಾಗಿವೆ. ವಿಶೇಷವಾಗಿ ರಾಷ್ಟ್ರಧ್ವಜದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಮಾಸ್ಕ್ ತಯಾರಿಸಿದರೆ ಹೇಗೆ ಎಂಬ ಐಡಿಯಾ ಹೊಳೆಯಿತು.
ಇದಕ್ಕೆ ಎಲೆಕ್ಟ್ರಿಕಲ್ ವ್ಯಾಪಾರಿ ರಂಜಿತ್ ಹಾಗೂ ಟೈಲರ್ ಜಿ.ಬಿ.ರಾಜು ಸಹಕಾರ ನೀಡಿದರು. ಬಳಿಕ ಪಿಎಂ ನರೇಂದ್ರ ಮೋದಿ ಅವರಿಗೆ ಕಳುಹಿಸಲು ಮುಂದಾದರು. ಅದರಂತೆ ಆಗಸ್ಟ್ 13 ರಂದು ವಿವೇಕಾನಂದ ಅವರ ಪುತ್ರಿ ಕೆ. ವಿ. ಕಾವ್ಯ ಹಾಗೂ ಈಕೆ ಸ್ನೇಹಿತೆ ಕವಿತಾ ಅವರು ದಾವಣಗೆರೆಯ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಮೂಲಕ ಮಾಸ್ಕ್ ಕಳುಹಿಸಿದ್ದರು.
ಇಪ್ಪತ್ತು ಕೇಸರಿ, ಹತ್ತು ಬಿಳಿ ಹಾಗೂ ಹತ್ತು ಹಸಿರು ಬಣ್ಣದ ಉತ್ತಮ ಗುಣಮಟ್ಟದ ಒಟ್ಟು 40 ಮಾಸ್ಕ್‌ಗಳನ್ನು ಪ್ರಧಾನಿ ಕಾರ್ಯಾಲಯದ ವಿಳಾಸಕ್ಕೆ ಕಳುಹಿಸಿ ಕೊಟ್ಟಿದ್ದರು. ಆದ್ರೆ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅಕ್ಟೋಬರ್ 10 ರಂದು ನರೇಂದ್ರ ಮೋದಿ ದಾವಣಗೆರೆಯ ಕುಟುಂಬ ಕಳುಹಿಸಿದ್ದ ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದ ಫೋಟೋ ಅನ್ನು ಪವನ್ ಚಕ್ರವರ್ತಿ ಕಳುಹಿಸಿದ್ದರು. ಇದನ್ನು ನೋಡಿದ ವಿವೇಕಾನಂದರ ಕುಟುಂಬಕ್ಕೆ ಸಂತೋಷವಾಯಿತು.
ಕಳೆದ ಅಕ್ಟೋಬರ್ 22 ರಂದು ಪ್ರಧಾನಿ ಕಾರ್ಯಾಲಯದಿಂದ ಮಾಸ್ಕ್ ಗಳು ಸಿಕ್ಕಿರುವ ಬಗ್ಗೆ ಸ್ವೀಕೃತಿ ಪತ್ರವನ್ನು ಕಾವ್ಯ ಹೆಸರನ್ನು ಉಲ್ಲೇಖಿಸಿ ಕಳುಹಿಸಿಕೊಡಲಾಗಿದೆ. ಈಗ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಮಾಸ್ಕ್ ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಅನೇಕ ಜನ ಈ ಮಾಸ್ಕ್‌ಗಳನ್ನು ಆರ್ಡರ್ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ.
ಆತ್ಮನಿರ್ಭರ ಯೋಜನೆಯಡಿ ಸ್ವ ಉದ್ಯೋಗ ನಡೆಸುತ್ತಿದ್ದ ವಿವೇಕಾನಂದ ಅವರಿಗೆ ಈಗ ಬಿಡುವಿಲ್ಲದ ಕೆಲಸ ಸಿಕ್ಕಂತಾಗಿದೆ. ಇವರ ಕಾರ್ಯಕ್ಕೆ ಪತ್ನಿ ಕೆ.ವಿ.ಶಾಂತಾ, ಪುತ್ರಿಯರಾದ ಕಾವ್ಯ, ನಮ್ರತಾ ಹಾಗೂ ಮಾನ್ಯ ಸಾಥ್ ನೀಡುತ್ತಾರೆ. ಮತ್ತೊಂದು ವಿಶೇಷ ಅಂದರೆ ಈಗ ಮಾಸ್ಕ್ ಕಾಯಕವೇ ಈ ಕುಟುಂಬಕ್ಕೆ ಜೀವನಾಧಾರವಾಗಿದೆ. ಜೊತೆಗೆ ಮೋದಿ ಮಾಸ್ಕ್ ಧರಿಸಿದ ಕಾರಣ ದೇಶಾದ್ಯಂತ ಇವರ ಮಾಸ್ಕ್ಗೆ ಮನ್ನಣೆ ದೊರೆತಂತಾಗಿದೆ.