ಹರಿಹರ: ತಾಲೂಕಿನ ಸಾಲಕಟ್ಟೆ ಮತ್ತು ಮಿಟ್ಲಕಟ್ಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಕೊಯ್ಲಿಗೆ ಬಂದ ಭತ್ತದ ಬೆಳೆಯು ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ನೆಲಕ್ಕೆ ಉರುಳಿದೆ. ಆದರೆ, ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳು ಬಂದು ರೈತರ ಕಷ್ಟವನ್ನು ಆಲಿಸಿಲ್ಲ ಎಂಬ ರೈತರ ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆ ಗಾಳಿಯ ಹೊಡೆತಕ್ಕೆ ಕಟಾವಿಗೆ ಬಂದ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕೆ ಉರುಳಿದೆ. ಆದರೆ, ಈ ಸಂಕಷ್ಟದಲ್ಲಿ ನರಳುತ್ತಿರುವ ರೈತರ ಸಮಸ್ಯೆ ಆಲಿಸದ ಅಧಿಕಾರಿಗಳ ವರ್ತನೆ ತಾಲೂಕಿನ ರೈತರಲ್ಲಿ ಆಕ್ರೋಶ ಮೂಡಿಸಿದೆ. ಕೃಷಿ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ಮಾಡಿ ಎಂದು ಬೇಡಿಕೊಂಡರು ಇದುವರೆಗೂ ಪರಿಶೀಲನೆಗೆ ಬರುತ್ತಿಲ್ಲ. ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಸ್ಥಿತಿ ಅವಲೋಕಿಸಿ ಸಮಸ್ಯೆಯನ್ನ ಸರ್ಕಾರಕ್ಕೆ ಮಾಹಿತಿ ನೀಡಿ, ರೈತರ ಕಷ್ಟಕ್ಕೆ ನೆರವಾಗಿ ಎಂದರೂ ರೈತರ ಗೋಳು ಕೇಳುವವರು ಇಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು ರೈತರಿಗೆ ಆಗಿರುವ ನಷ್ಟವನ್ನು ಅವಲೋಕಿಸಲು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ರೈತರ ನೆರವಿಗೆ ನಿಲ್ಲಬೇಕಾಗಿದೆ. ಅಧಿಕಾರಿಗಳು ಕೊರೊನಾ ಗುಂಗಿನಲಿ ಇರುವುದು ನಮಗೂ ತಿಳಿದಿದೆ. ಆದರೆ, ನಮ್ಮ ಕಷ್ಟವನ್ನೂ ಅವರೇ ನೋಡಬೇಕು. ಜಮೀನುಗಳನ್ನು ಪರಿಶೀಲಿಸಿ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.