ದಾವಣಗೆರೆ : ಜಿಲ್ಲೆಯಲ್ಲಿಂದು ಗೃಹಲಕ್ಷ್ಮಿ ಯೋಜನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಮನೆ ಯಜಮಾನಿಗೆ 2 ಸಾವಿರ ರೂ. ಹಣ ನೀಡುತ್ತಿರುವ ಸರ್ಕಾರಕ್ಕೆ ಮಹಿಳೆಯರು ಧನ್ಯವಾದ ತಿಳಿಸಿದರು. ಇನ್ನು ಕೆಲವರು, ನಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಗೊಂದಲಕ್ಕೀಡಾದರು.
ಫಲಾನುಭವಿ ಶ್ವೇತಾ ಮಾತನಾಡಿ, "ನಾನು ಹೂ ಖರೀದಿಸಿ ತಂದು ಮನೆಯಲ್ಲಿ ಹಾರ ತಯಾರಿಸುತ್ತಿದ್ದೇನೆ. ಅದಕ್ಕೆ ಬಂಡವಾಳ ಹಾಕಲು ಬಡ್ಡಿಗೆ ಹಣ ಪಡೆದು ಸಾಲ ಮಾಡುತ್ತಿದ್ದೆ. ಹೀಗೆ ಮಾಡುತ್ತಿದ್ದರಿಂದ ನಮಗೆ ಮನೆ ನಡೆಸಲು ಆಗುತ್ತಿರಲ್ಲಿಲ್ಲ. ಇದೀಗ ಎರಡು ಸಾವಿರ ರೂಪಾಯಿ ಬರುವುದರಿಂದ ಆ ಸಮಸ್ಯೆ ದೂರವಾಗಲಿದ್ದು, ಮನೆ ನಡೆಸಬಹುದು. ಮಕ್ಕಳ ಶಾಲೆಯ ಫೀಸ್ ಕಟ್ಟಬಹುದು. ಗಂಡಂದಿರು ಹಣ ಕೊಡುವತನಕ ಕಾಯುವ ಪರಿಸ್ಥಿತಿ ಇತ್ತು. ಇದೀಗ ಈ ಸಮಸ್ಯೆ ದೂರವಾಗಲಿದೆ" ಎಂದರು.
ವಂದನ ಎಂಬವರು ಮಾತನಾಡಿ, "ತಿಂಗಳ ಕೊನೆಯಲ್ಲಿ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ಮನೆ ಖರ್ಚಿಗೆ ತೊಂದರೆಯಾಗುತ್ತಿತ್ತು. ಇದೀಗ ಸರ್ಕಾರದವರು ಎರಡು ಸಾವಿರ ರೂಪಾಯಿ ಹಣ ನೀಡುತ್ತಿರುವುದರಿಂದ ಈ ಸಮಸ್ಯೆ ದೂರವಾಗಲಿದೆ. ಮನೆ ಖರ್ಚಿಗೆ ಸಹಾಯವಾಗಲಿದೆ. ಯಾವುದೇ ಸರ್ಕಾರ ಕೂಡ ಈ ರೀತಿಯ ಯೋಜನೆ ಕೊಟ್ಟಿರಲಿಲ್ಲ. ಉಳಿದ ಗ್ಯಾರಂಟಿಗಳಿಂದ ಮಹಿಳೆಯರಿಗೆ ಸಾಕಷ್ಟು ಒಳ್ಳೆಯದಾಗುತ್ತಿದೆ" ಎಂದು ಹೇಳಿದರು.
ಜಯಂತಿ ಎಂಬವರು ಪ್ರತಿಕ್ರಿಯಿಸಿ, "ಸಿಎಂ ಸಿದ್ದರಾಮಯ್ಯನವರ ಸರ್ಕಾರ ಬಂದಾಗಿನಿಂದ ಮಹಿಳೆಯರಿಗೆ ಹೆಚ್ಚು ಒಳ್ಳೆಯದನ್ನೇ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಧನ್ಯವಾದಗಳು. ಕೆಲವು ಬಾರಿ ಒಂದೊಂದು ರೂಪಾಯಿಗೂ ಕಷ್ಟ ಇರುತ್ತದೆ. ಇಂಥ ಕ್ಲಿಷ್ಟಕರ ಸಮಯದಲ್ಲಿ ಸರ್ಕಾರ ನೀಡುತ್ತಿರುವ ಎರಡು ಸಾವಿರ ಹಣ ಉಪಯೋಗವಾಗಲಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಈಟಿವಿ ಭಾರತ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವಾಸಂತಿ ಉಪ್ಪಾರ್, "ಈ ಯೋಜನೆಗೆ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 3,27,870 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3,24,046 ಮಹಿಳಾ ಫಲಾನುಭವಿಗಳಿಗೆ ಒಟ್ಟು 64 ಕೋಟಿ 80 ಲಕ್ಷದ 92 ಸಾವಿರ ರೂ. ಹಣ ವರ್ಗಾವಣೆ ಮಾಡಲಾಗಿದೆ. ಕೆಲಕಾಲ ಸರ್ವರ್ ಬ್ಯುಸಿ ಇರುವುದರಿಂದ ಇಂದು ಮತ್ತು ನಾಳೆ ಆಯಾಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಮಹಿಳೆಯರು ಹೊಸದಾಗಿ ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಆಡಚಣೆಯಿಂದ ತೊಂದರೆಗೊಳಗಾದ ಮಹಿಳೆಯರು ಕೂಡ ಮತ್ತೆ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬಹುದು" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶಕ್ಕೆ ವಿಸ್ತರಿಸುವ ಚಿಂತನೆ ಇದೆ: ರಾಹುಲ್ ಗಾಂಧಿ