ದಾವಣಗೆರೆ: ಸಿಎಂ ಆಗಲು ಯೋಗ, ಯೋಗ್ಯತೆ ಇರಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಂದಿನ ಸಿಎಂ ಎಂದು ಕಾರ್ಯಕರ್ತರಿಂದ ಕೇಳಿ ಬರುತ್ತಿರುವ ಘೋಷಣೆ ಬಗ್ಗೆ ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಶಾಲೆ ಉದ್ಘಾಟನೆಗೂ ಮುನ್ನ ಪ್ರತಿಕ್ರಿಯಿಸಿದ ಅವರು, ಯೋಗ, ಯೋಗ್ಯತೆ ಇದ್ದರೆ ಯಾರು ಏನು ಬೇಕಾದರೂ ಆಗಬಹುದು. ಅದಕ್ಕೆ ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಬೇಕು ಎಂದರು.
ಪ್ರವಾದಿ ಮುಹಮದ್ರ ಕುರಿತು ನೂಪುರ್ ಶರ್ಮಾ ಹೇಳಿಕೆ ನೀಡಿ 15 ದಿನಗಳು ಕಳೆದಿವೆ. ಅದ್ರೀಗ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೋ ದುರುದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಿ ಈ ರೀತಿ ಮಾಡುತ್ತಿದ್ದಾರೆ. ಕಾನೂನು ಇದೆ, ಅಲ್ಲಿ ಪ್ರಶ್ನೆ ಮಾಡಬಹುದಿತ್ತು. ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿ ಆರೋಪ: ಶಾಲೆಗೆ ಹೋಗುವುದಕ್ಕೂ ಹೆದರುತ್ತಿರುವ ಬಾಲಕಿ
ಬಿಜೆಪಿ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ ಹಾಕಿದ್ದಾರೆ. ಕಾಂಗ್ರೆಸ್, ಜೆಡಿಎಸ್ನಿಂದ ಇನ್ನೂ ಹೆಚ್ಚಿನ ಜನ ಬರುವವರಿದ್ದಾರೆ. ಈಗಲೇ ಹೇಳಿದರೆ ಅವರನ್ನು ಅವರ ಪಕ್ಷದ ವರಿಷ್ಠರು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಅವರು ಬಂದಾಗ ನಿಮಗೆ ಗೊತ್ತಾಗಲಿದೆ ಎಂದರು. ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ವಿರೋಧ ಕುರಿತು ಮಾತನಾಡಿ, ಕಾಂಗ್ರೆಸ್ನವರಿಗೆ ಬೇರೆ ವಿಷಯ ಇಲ್ಲ. ಅದನ್ನೇ ಹಿಡಿದು ಕುಳಿತಿದ್ದಾರೆ. ನಾವು ಪ್ರತಿಕ್ರಿಯೆ ಕೊಟ್ಟರೆ ವಿವಾದ ಮುಂದುವರಿಯುತ್ತದೆ. ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.