ತುಮಕೂರು/ದಾವಣಗೆರೆ: ಗಣಿಗಾರಿಕೆ ನಿರ್ವಹಣೆಗೆ ಸಂಬಂಧಿಸಿದಂತೆ ಗಣಿ ಮಾಲೀಕರು ಮತ್ತು ಕಾರ್ಮಿಕರಿಗೆ ತರಬೇತಿ ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಬಳ್ಳಾರಿಯಲ್ಲಿ 'ಸ್ಕೂಲ್ ಆಫ್ ಮೈನಿಂಗ್’ ಪ್ರಾರಂಭಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದೇಶದಲ್ಲೇ ಎರಡನೇ ಸ್ಕೂಲ್ ಆಫ್ ಮೈನಿಂಗ್ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಸುಮಾರು 50 ಎಕರೆ ಜಮೀನಿನಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. ಈಗಾಗಲೇ ಯೋಜನಾ ವರದಿ (ಡಿಪಿಆರ್)ಯೂ ಸಿದ್ಧವಾಗಿದೆ ಎಂದರು.
ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಇಲಾಖೆಯ ಸಿಬ್ಬಂದಿ, ಗಣಿ ಮಾಲೀಕರು ಹಾಗೂ ಸಿಬ್ಬಂದಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡಲಾಗುವುದು. ಅವೈಜ್ಞಾನಿಕ ಗಣಿಗಾರಿಕೆ ತಡೆಯುವುದು, ಜೊತೆಗೆ ಎಲ್ಲಾ ರೀತಿಯ ಗಣಿಗಾರಿಕೆ ತರಬೇತಿ ಪ್ರಾರಂಭಿಸಲಾಗುವುದು. ಮೈನಿಂಗ್ ಆಪರೇಟಿಂಗ್ ಮತ್ತು ಉದ್ದಿಮೆದಾರರಿಗೆ ವೈಜ್ಞಾನಿಕವಾಗಿ ಗಣಿಗಾರಿಕೆಯನ್ನು ಹೇಗೆ ನಿರ್ವಹಿಬೇಕೆಂದು ತರಬೇತಿ ನೀಡುವುದೇ ಎಂಬು ಇದರ ಮುಖ್ಯ ಉದ್ದೇಶ ಎಂದರು.
ಮಾದರಿ ಮರಳು ನೀತಿ:
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ದೇಶಕ್ಕೆ ಮಾದರಿಯಾಗುವಂತಹ ಮರಳು ನೀತಿಯನ್ನು ಇಲಾಖೆ ಸಿದ್ಧಪಡಿಸಿದೆ. ಬೇರೆ ರಾಜ್ಯದವರು ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡು ಅನುಷ್ಠಾನ ಮಾಡುವಂತಹ ನೀತಿ ಇದಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಯವರೊಂದದಿಗೆ ಚರ್ಚಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಸತ್ಯ, ಇದನ್ನು ತಪ್ಪಿಸಲು ಈ ಕಾನೂನು ಜಾರಿಗೆ ತರಲಾಗುತ್ತಿದ್ದು, ಮರಳನ್ನು ನದಿಯಿಂದ ಸ್ಟಾಪ್ ಪಾಯಿಂಟ್ಗೆ ತಂದು ಅದರಲ್ಲಿ ಮಿಶ್ರಿತವಾಗಿರುವ ತ್ಯಾಜ್ಯವನ್ನು ಬೇರ್ಪಡಿಸಿ ಎಬಿಸಿ ಎಂದು ಗ್ರೇಡ್ ಮಾಡಲಾಗುತ್ತದೆ. ಗ್ರೇಡ್ ಮಾಡುವುದ್ದರಿಂದ ತ್ಯಾಜ್ಯ ಮರಳು ನೀಡುವುದನ್ನು ತಪ್ಪಿಸಬಹುದಾಗಿದ್ದು, ಪ್ಯಾಕಿಂಗ್ ಮಾಡಿ ಮರಳು ನೀಡುವುದರಿಂದ ಮರಳು ವೇಸ್ಟ್ ಆಗುವುದನ್ನು ತಪ್ಪಿಸಬಹುದಾಗಿದೆ.
ಪ್ಯಾಕಿಂಗ್ ಮಾಡುವ ಮರಳಿನ ಪ್ಯಾಕೇಟ್ ಮೇಲೆ ಸರ್ಕಾರದ ಲೋಗೊ...
ಇಲಾಖೆಯಿಂದ ಮರಳನ್ನು ಪ್ಯಾಕಿಂಗ್ ಮಾಡುವ ಮೂಲಕ ಸರ್ಕಾರದ ಲೋಗೊ ಹಾಗೂ ಸೀರಿಯಲ್ ಸಂಖ್ಯೆ ಹಾಕಿ ಸರ್ಕಾರದ ಬೆಲೆಯಲ್ಲಿ ಮಾರಾಟ ಮಾಡುತ್ತೇವೆ. ಮರಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವುದರಿಂದ ಅಕ್ರಮಕ್ಕೆ ಬ್ರೇಕ್ ಹಾಕಬಹುದಾಗಿದೆ ಎಂದರು.