ದಾವಣಗೆರೆ: ಬೆಂಗಳೂರಿನಲ್ಲಿ ನಿನ್ನೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಮೃತಪಟ್ಟ ತಾಯಿ ಮತ್ತು ಮಗುವಿನ ಅಂತ್ಯಕ್ರಿಯೆಯನ್ನು ಅವರ ತವರು ಜಿಲ್ಲೆ ದಾವಣಗೆರೆಯಲ್ಲಿ ಇಂದು ನಡೆಸಲಾಗಿದೆ. ತೇಜಸ್ವಿನಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ನಗರದ ವೈಕುಂಠ ಏಕಧಾಮದಲ್ಲಿ ನಡೆಸಿದರೆ, ಮಗು ವಿಹಾನ್ ಶಾಮನೂರು ರಸ್ತೆಯಲ್ಲಿನ ಬಾಟಲ್ ಬಿಲ್ಡಿಂಗ್ ಹಿಂಭಾಗದ ರುದ್ರಭೂಮಿಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವಿಧಿವಿಧಾನದಂತೆ ನಡೆಸಲಾಗಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂತ್ಯಕ್ರಿಯೆಗೂ ಮುನ್ನ ಮೊಮ್ಮಗ ವಿಹಾನ್ ಹಣೆಗೆ ಅಜ್ಜಿ ಕೊನೆಯ ಸಿಹಿ ಮುತ್ತಿಟ್ಟು ಕಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗೋಳಾಟದ ದೃಶ್ಯ ಮನಕಲಕುವಂತಿತ್ತು. ಇದಕ್ಕೂ ಮುನ್ನ ಅಗಲಿದ ತಾಯಿ ಮತ್ತು ಮಗುವಿನ ಮೃತದೇಹವನ್ನು ಒಂದೇ ವಾಹನದಲ್ಲಿ ಕರೆತರಲಾಯಿತು. ಬಳಿಕ ತಾಯಿಯ ಮೃತದೇಹದ ಬಳಿಯಿಂದ ಮಗುವಿನ ಮೃತದೇಹವನ್ನು ಬೇರ್ಪಡಿಸಲಾಯಿತು. ಈ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಇಡೀ ಕುಟುಂಬವಷ್ಟೇ ಅಲ್ಲದೇ ಸ್ಥಳೀಯರೂ ಸಹ ಕಣ್ಣೀರು ಸುರಿಸಿ ಮಮ್ಮಲ ಮರುಗಿದರು.
ಮಗುವನ್ನು ಹೊತ್ತು ಸಾಗಿದ ತಂದೆ: ಅಂತ್ಯಕ್ರಿಯೆಗೂ ಮುನ್ನ ತಾಯಿ ಮತ್ತು ಮಗನ ಮೃತದೇಹಗಳನ್ನು ಬೇರ್ಪಡಿಸುವಾಗ ತಂದೆ ಲೋಹಿತ್ ಅವರ ಗಂಟಲು ತುಂಬಿ ಬಂದಿತ್ತು. ತುಂಬಿ ತುಳುಕುತ್ತಿದ್ದ ಕಣ್ಣೀರಿನ ಜೊತೆ ಮಗನ ಮೃತದೇಹ ಹೊತ್ತು ತಂದಿದ್ದನ್ನು ಕಂಡು ಸ್ಥಳೀಯರೂ ಕಣ್ಣೀರಾದರು. ತೇಜಸ್ವಿನಿ ಹಾಗೂ ವಿಹಾನ್ ಮೃತದೇಹ ಬಸವೇಶ್ವರ ನಗರದಲ್ಲಿರುವ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ತಾಯಿ, ಮಗ ಇಬ್ಬರು ಮಲಗಿದ್ದಾರೋ ಎಂಬಂತೆ ಭಾಸವಾಗುತ್ತಿದೆ ಎಂದು ಮಗಳು ತೇಜಸ್ವಿನಿ ಹಾಗೂ ಮೊಮ್ಮಗನನ್ನು ಕಳೆದುಕೊಂಡ ಅಜ್ಜಿ ಕಣ್ಣೀರು ಹಾಕುತ್ತಾ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ನಮಗೆ ಪರಿಹಾರ ಬೇಡವೇ ಬೇಡ: ಸರ್ಕಾರದ 20 ಲಕ್ಷ ರೂಪಾಯಿ ಪರಿಹಾರ ನಮಗೆ ಬೇಡವೇ ಬೇಡ. ನಾವೇ 50 ಲಕ್ಷ ರೂ ಕೊಡುತ್ತೇನೆ. ಗುತ್ತಿಗೆದಾರರನ್ನು ಸಸ್ಪೆಂಡ್ ಮಾಡುವ ಮೂಲಕ ಬ್ಲಾಕ್ ಲಿಸ್ಟ್ಗೆ ಸೇರಿಸಬೇಕು. ಒಂದು ಕೋಟಿ ರೂ ಕೊಡ್ತೀನಿ, ನನ್ನ ಮೊಮ್ಮಗ ಮತ್ತು ಮಗಳ ಜೀವ ಕೊಡಿಸ್ತೀರಾ ಮುಖ್ಯಮಂತ್ರಿ ಬೊಮ್ಮಾಯಿಯವರೇ? ನಿಮ್ಮ ಪರಿಹಾರ ನಮಗೆ ಬೇಕಿಲ್ಲ ಎಂದು ತೇಜಸ್ವಿನಿಯವರ ತಂದೆ ಮದನ್ ಆಕ್ರೋಶ ವ್ಯಕ್ತಪಡಿಸಿದರು.
ಕಮಿಷನ್ ಕಾಮಗಾರಿಗೆ ಜೀವ ಕಳೆದುಕೊಂಡಿದ್ದೇವೆ: ಮೆಟ್ರೋ ಕಾಮಗಾರಿ ಹಾಗೂ ಈ ಸ್ಮಾರ್ಟ್ ಸಿಟಿ ಕಾಮಗಾರಿಗೆ ಮಗಳು ಮತ್ತು ಮೊಮ್ಮಗನನ್ನು ಕಳೆದುಕೊಂಡಿದ್ದೇವೆ ಎಂದು ತೇಜಸ್ವಿನಿ ದೊಡ್ಡಪ್ಪ ರಾಘವೇಂದ್ರ ರಾವ್ ಸರ್ಕಾರ ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಬಗ್ಗೆ ಮಾಧ್ಯಮದವರಿಗಿದ್ದ ಕಾಳಜಿ ಈ ರಾಜ್ಯದ ಮುಖ್ಯಮಂತ್ರಿಗಿಲ್ಲ. ಈ ಘಟನೆಗೆ ಹೊಣೆ ಯಾರು? ನಾವು ರೊಕ್ಕ ಕೊಟ್ಟು ಟ್ಯಾಕ್ಸ್ ಕಟ್ತೀವಿ ಸ್ವಾಮಿ, ಇಂತಹ ಕಮಿಷನ್ ಕಾಮಗಾರಿಗಳಿಂದ ನಮ್ಮ ಮಗಳು ಮತ್ತು ಮೊಮ್ಮಗನ ಜೀವ ಹೋಯಿತು. ರಾಜಕೀಯ ನಾಯಕರು ರಾಜಕೀಯ ನಾಟಕವಾಡುತ್ತಾ ಕಮಿಷನ್ ತಿನ್ನುತ್ತಾ ನಮ್ಮಂತವರು ಜೀವ ಬಲಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ನಿರ್ಮಾಣ ಕಂಪನಿ, ಬಿಎಂಆರ್ಸಿಎಲ್ನ 8 ಜನರ ವಿರುದ್ಧ ಪ್ರಕರಣ