ದಾವಣಗೆರೆ: ಉಪಚುನಾವಣೆಗೋಸ್ಕರ ಮರಾಠ ನಿಗಮ ಮಾಡಿಲ್ಲ. ಭಾಷೆ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿಲ್ಲ. ಮರಾಠ ಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡಿ ನಿಗಮವನ್ನು ಸಿಎಂ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಘಟನೆಗಳು ಹೋರಾಟ ಮಾಡುವುದು ಬೇಡ. ಮರಾಠ ಭಾಷೆಗೆ, ರಾಜಕೀಯಕ್ಕಾಗಿ ಆದ್ಯತೆ ನೀಡಿಲ್ಲ. ನನ್ನ ಕ್ಷೇತ್ರ ಸೇರಿದಂತೆ ಎಲ್ಲೆಡೆ ಮರಾಠರಿದ್ದು, ಸಮಾಜದ ಅಭಿವೃದ್ಧಿಗಾಗಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಕಾಂಗ್ರೆಸ್ ಮುಖಂಡರು ರಕ್ಷಿಸುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಆ ಪಕ್ಷಕ್ಕೆ ಮುಳುವಾಗಲಿದೆ. ಪ್ರಚೋದನೆ ನೀಡಿ ಸಂಪತ್ ರಾಜ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಳುಹಿಸಿರಬಹುದು. ಬೆಂಕಿ ಹಚ್ಚುವುದು,ಗಲಾಟೆ ಮಾಡುವವರು ದೇಶದ್ರೋಹಿಗಳು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಬೆಳೆಸಿದವರೇ ಅವರನ್ನು ಕೊಂದರು. ಯಾರೇ ಆಗಲಿ ನೀಚ ಕೃತ್ಯ ಮಾಡುವವರಿಗೆ ಬೆಂಬಲ ಕೊಡಬಾರದು. ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ ಆದರೂ ಕಾಂಗ್ರೆಸ್ ಮುಖಂಡರು ಹೋಗಲಿಲ್ಲ. ಸಂಪತ್ ರಕ್ಷಿಸಿದರೆ ಮುಂದೆ ನೀವೇ ಪರಿಣಾಮ ಎದುರಿಸ್ತೀರಿ ಎಂದು ಎಚ್ಚರಿಸಿದರು.
ಗಲಭೆ ನಡೆದಾಗ ಡಿಜೆ ಹಳ್ಳಿ, ಕೆಜಿ ಹಳ್ಳಿಗೆ ಡಿ.ಕೆ. ಶಿವಕುಮಾರ್ ಹೋಗಲಿಲ್ಲ. ನೀವು ಆದರ್ಶ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಕಾಂಗ್ರೆಸ್ ಮೋಸ ರಾಜಕಾರಣ ಮಾಡುತ್ತಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿದ್ದಕ್ಕೆ ದೇಶದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ ಎಂದರು.
ನಾವೆಲ್ಲ ಸಹಿ ಮಾಡಿ ಇಂಥವರನ್ನೇ ಮಂತ್ರಿ ಮಾಡಿ ಎಂಬ ಒತ್ತಾಯ ಮಾಡಿಲ್ಲ. ಇದನ್ನೇ ನಾನು ಒತ್ತಿ ಒತ್ತಿ ಹೇಳುತ್ತಿದ್ದೇನೆ. ಇಂಥವರನ್ನೇ ಮಂತ್ರಿ ಮಾಡಿ ಎಂಬ ಒತ್ತಾಯ ಮಾಡಿಲ್ಲ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಗೆ ಆದ್ಯತೆ ನೀಡಿ. ಜಿಲ್ಲೆಯ ಯಾರಾದರೂ ಒಬ್ಬ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂಬುದಷ್ಟೇ ನಮ್ಮ ಬೇಡಿಕೆ. ಕಾಲ ಗರ್ಭದಲ್ಲಿ ಏನು ಅಡಗಿದೆ ಎಂಬುದು ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ, ಹೈಕಮಾಂಡ್ ನಿರ್ಧಾರವೇ ಅಂತಿಮ. ಸಿಎಂ ಸಮತೋಲನ ಕಾಪಾಡುವ ವಿಶ್ವಾಸ ನಮಗಿದೆ ಎಂದೂ ರೇಣುಕಾಚಾರ್ಯ ಹೇಳಿದರು.