ಹರಿಹರ: ಡಯಾಲಿಸಿಸ್ ಮಾಡಿಸಲು ಬಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಭಾನುವಳ್ಳಿ ಗ್ರಾಮದ ಹೆಚ್.ಕನ್ನಪ್ಪ (58) ಮೃತ ದುರ್ದೈವಿ. ಇವರು ಕಳೆದ ಆರು ತಿಂಗಳಿಂದ ಡಯಾಲಿಸಿಸ್ ಮಾಡಿಸುತ್ತಿದ್ದಾರೆ. ನಿಗದಿಯಂತೆ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಇವರಿಗೆ ಡಯಾಲಿಸಿಸ್ ಪ್ರಕ್ರಿಯೆ ಆರಂಭಿಸಿದ್ದು, ಮಧ್ಯಾಹ್ನ 2ರವರೆಗೆ ನಡೆದಿದೆ. ನಂತರ 2.45ಕ್ಕೆ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕೇಂದ್ರದಲ್ಲಿ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿಂದ ತಂದೆಯವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಯಾಲಿಸಿಸ್ ಸಂದರ್ಭದಲ್ಲಿಯೇ ವಿದ್ಯುತ್ ವ್ಯತ್ಯಯವಾಗಿದ್ದು ನಮ್ಮ ತಂದೆ ಸಾವಿಗೆ ಕಾರಣ. ಇಂತಹ ಸ್ಥಿತಿ ಬೇರೆಯವರಿಗೆ ಬರಬಾರದು ಎಂದು ಮೃತರ ಪುತ್ರ ಹರೀಶ್ ಬೇಸರ ವ್ಯಕ್ತಪಡಿಸಿದರು.
ಡಯಾಲಿಸಿಸ್ ಪ್ರಕ್ರಿಯೆ ಮುಗಿದಿತ್ತು. ನಂತರ ರೋಗಿ ಏಕೋ ನಡುಕ ಉಂಟಾಗುತ್ತಿದೆ ಎಂದರು. ಅವರನ್ನು ಪರೀಕ್ಷೆ ಮಾಡುವಾಗಲೇ ಅವರು ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ. ವಿದ್ಯುತ್ ವ್ಯತ್ಯಯವಾದರೆ ಡಯಾಲಿಸಿಸ್ ಯಂತ್ರ ಸ್ಥಗಿತಗೊಳುವುದಿಲ್ಲ. ಯುಪಿಎಸ್ ಬ್ಯಾಕ್ ಅಪ್ ಇದೆ ಎಂದು ಸ್ಥಳದಲ್ಲಿದ್ದ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ.
ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ ಎಂದು ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ರಾಮಪ್ಪ ತಾಕೀತು ಮಾಡಿದರು. ಕೇಂದ್ರದಲ್ಲಿ ಖಾಲಿ ಇರುವ ತಂತ್ರಜ್ಞರ ನೇಮಕಾತಿ ಮಾಡಲು ಕೇಂದ್ರ ನಿರ್ವಹಣೆ ಮಾಡುತ್ತಿರುವ ಬಿಆರ್‌ಎಸ್ ಸಂಸ್ಥೆಗೆ ಪತ್ರ ಬರೆಯಿರಿ. ಪೂರ್ಣ ಪ್ರಮಾಣದ ಸಿಬ್ಬಂದಿ ಇರುವಂತೆ ನೋಡಿಕೊಳ್ಳಿ ಎಂದು ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಎಲ್.ಹನುಮನಾಯ್ಕರಿಗೆ ಸೂಚಿಸಿದರು. ಸ್ಥಳಕ್ಕೆ ಸಿಪಿಐ ಶಿವಪ್ರಸಾದ್ ಆಗಮಿಸಿ ಪರಿಶೀಲನೆ ನಡೆಸಿದರು.