ದಾವಣಗೆರೆ: ನಟ ಅಂಬರೀಶ್ ನಮ್ಮನ್ನು ಅಗಲಿದ ಸಂದರ್ಭದಲ್ಲಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ನಡವಳಿಕೆ ಬೇರೆಯದ್ದೇ ಇತ್ತು. ಆದ್ರೆ ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸುಮಲತಾ ಕಣಕ್ಕಿಳಿದ ಮೇಲೆ ಕುಮಾರಸ್ವಾಮಿ ವರಸೆ ಬದಲಾಗಿದೆ ಎಂದು ನಟಿ ಮಾಳವಿಕಾ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬೆದರಿಕೆ ಹಾಕುವ ಸಂಸ್ಕಾರ, ಬೆದರಿಸಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.
ಸುಮಲತಾ ಪರ ಸ್ಯಾಂಡಲ್ವುಡ್ ತಾರೆಯರ ಪ್ರಚಾರದ ಬಗ್ಗೆ ಇಲ್ಲಿ ಡ್ರಾಮಾ ಮಾಡಿದರೆ ಆಗದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಬೆದರಿಕೆಗೆ ಯಾರೂ ಬಗ್ಗುವುದಿಲ್ಲ, ಹೆದರುವುದೂ ಇಲ್ಲ ಎಂಬುದನ್ನು ಸಿಎಂ ಅರಿಯಬೇಕು. ಸುಮಲತಾ ಅವರ ಬಗ್ಗೆ ವೈಯಕ್ತಿಕವಾಗಿ ಹೆಚ್ಡಿಕೆ ಟೀಕೆ ಮಾಡಿರುವುದು ಸಲ್ಲ ಎಂದು ಮಾಳವಿಕಾ ಹೇಳಿದರು.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿದೆ. ಪಕ್ಷದ ರಾಷ್ಟ್ರೀಯ ಮುಖಂಡರು ನೀಡಿದ ಸೂಚನೆ ಮೇರೆಗೆ ಸುಮಲತಾ ಅವರಿಗೆ ಬೆಂಬಲ ನೀಡಲಾಗುತ್ತಿದೆ ಎಂದರು. ಇನ್ನು ರಾಜ್ಯದಲ್ಲಿ ಮೋದಿ ಮೋದಿ ಅಂತಾ ಘೋಷಣೆ ಕೂಗಿದರೆ ಕಾನೂನು ಬಾಹಿರವಾಗಿ ಕೂಡಿ ಹಾಕಲಾಗುತ್ತದೆ. ಜೊತೆಗೆ ಪೊಲೀಸ್ ಜೀಪ್ನಲ್ಲಿ ಕರೆದೊಯ್ಯಲಾಗುತ್ತದೆ. ಬೇಳೂರು ಗೋಪಾಲಕೃಷ್ಣ ಮೋದಿ ಗುಂಡಿಕ್ಕಿ ಕೊಲ್ಲಿ ಅಂತಾರೆ. ಮತ್ತೊಬ್ಬ ಜೆಡಿಎಸ್ ಶಾಸಕ ಶ್ರೀಕಂಠೇಗೌಡ ಅವರು ಮೋದಿ ಅಂತಾ ಹೇಳಿಕೊಂಡು ಬಂದರೆ ಕಪಾಳಕ್ಕೆ ಹೊಡೀರಿ ಅಂತಾರೆ. ಇದ್ಯಾವ ಸಂಸ್ಕೃತಿ ಸೂಚಿಸುತ್ತದೆ ಎಂದು ಮಾಳವಿಕಾ ಪ್ರಶ್ನಿಸಿದ್ದಾರೆ.
ಸುಮಲತಾ ಅಂಬರೀಶಗೆ ಮಂಡ್ಯದಲ್ಲಿ ಪ್ರಚಾರಕ್ಕೆ ಬರುವವರಿಗೆ ಕುಮಾರಸ್ವಾಮಿ ಸರ್ಕಾರದ ಮೂಲಕ ಬೆದರಿಸುವ ತಂತ್ರಕ್ಕೆ ಮುಂದಾಗಿದ್ದಾರೆ. ಅಂಬರೀಷ್ ಮೇಲಿನ ಅಭಿಮಾನ, ಜನರ ಸ್ವಾಭಿಮಾನದ ಮೇಲೆ ಈ ಬಾರಿ ಮಂಡ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಅವರ ಘನತೆಗೆ ತಕ್ಕುದಾಗಿಲ್ಲ ಎಂದು ಖಂಡಿಸಿದರು.