ದಾವಣಗೆರೆ: ಲಾರಿವೊಂದು ಹಳ್ಳದಲ್ಲಿ ಸಿಲುಕಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ-ಚಿರಡೋಣಿ ನಡುವಿನ ಹಳ್ಳದಲ್ಲಿ ಈ ಘಟನೆ ನಡೆದಿದೆ.
ಜನರನ್ನು ತುಂಬಿಕೊಂಡು ಹಳ್ಳ ದಾಟುತ್ತಿದ್ದ ಲಾರಿ ದೊಡ್ಡಘಟ್ಟ-ಚಿರಡೋಣಿ ನಡುವೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿಕೊಂಡಿದೆ. ಹಳ್ಳದಲ್ಲಿ ಸಿಲುಕಿದ ಲಾರಿಯಲ್ಲಿ 50ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು. ಸ್ವಲ್ಪ ಯಾಮಾರಿದ್ರು ಭೋರ್ಗರೆಯುವ ಹಳ್ಳದಲ್ಲಿ 50ಕ್ಕೂ ಹೆಚ್ಚು ಜನ ಕೊಚ್ಚಿ ಹೋಗುತ್ತಿದ್ದರು. ಹಳ್ಳ ದಾಟುತ್ತಿದ್ದ ವೇಳೆ ಲಾರಿಯ ಒಂದು ಭಾಗ ಹಳ್ಳದಲ್ಲಿ ಕುಸಿದು ಸಿಲುಕಿಕೊಂಡಿತ್ತು. ತಕ್ಷಣ ಸ್ಥಳೀಯರು ಲಾರಿಯಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ.
ಇದೇ ಹಳ್ಳದಲ್ಲಿ ಕಳೆದ ವರ್ಷ ಪಡಿತರ ಲಾರಿ ಸಿಲುಕಿ ಅದ್ವಾನವಾಗಿತ್ತು. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಇದೇ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಇಷ್ಟು ಘಟನೆ ಜರುಗಿದ್ದರಿಂದ ಗ್ರಾಮಸ್ಥರು ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದರು. ಆದರೂ ಈ ಭಾಗದ ಜನಪ್ರತಿನಿಧಿಗಳು ಮಾತ್ರ ಇತ್ತ ಗಮನ ಹರಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್: ಜೆಸಿಬಿಯಿಂದ ರಕ್ಷಣೆ