ದಾವಣಗೆರೆ: ಪತ್ನಿಯನ್ನು ಹತ್ಯೆ ಮಾಡಿದ್ದ ಹಂತಕನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹನುಮಂತಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ. 2011 ರಲ್ಲಿ ವೀಣಾ ಎಂಬುವರ ಜೊತೆ ಈತನ ವಿವಾಹವಾಗಿತ್ತು. ಅರ್ಧ ತೊಲ ಬಂಗಾರ ಹಾಗೂ 15 ಸಾವಿರ ರೂಪಾಯಿ ವರದಕ್ಷಿಣೆ ನೀಡಲಾಗಿತ್ತು. ಆದ್ರೆ, ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ನಂತರ ಹನುಮಂತಪ್ಪ ವೀಣಾ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.
ನಗರ ಉಪವಿಭಾಗದ ಡಿವೈಎಸ್ಪಿ ಅಶೋಕ್ ಕುಮಾರ್ ಈ ಪ್ರಕರಣದ ತನಿಖೆ ನಡೆಸಿ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಧೀಶರಾದ ಕೆಂಗಬಾಲಯ್ಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 47 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡಿಸಿದ್ದರು.
ಅಳಿಯನನ್ನು ಹತ್ಯೆ ಮಾಡಿದ್ದ ಮಾವನಿಗೂ ಜೀವಾವಧಿ ಶಿಕ್ಷೆ :
ಮತ್ತೊಂದೆಡೆ ಹೊನ್ನಾಳಿ ತಾಲೂಕಿನ ಟಿ. ಗೋಪಗೊಂಡನಹಳ್ಳಿಯ ಮಂಜಪ್ಪ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಮಂಜಪ್ಪ ತನ್ನ ಪುತ್ರಿಯನ್ನು ಶಿವಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ದ. ಮಂಜಪ್ಪ ಇರುವ ನಿವಾಸದ ಪಕ್ಕದಲ್ಲಿಯೇ ಶಿವಕುಮಾರ್ ಕೂಡ ವಾಸವಿದ್ದ. 2017 ರ ಆಗಸ್ಟ್ 6 ರಂದು ಕೂಲಿ ಕೆಲಸದ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಂಜಪ್ಪ ದೊಣ್ಣೆಯಿಂದ ಶಿವಕುಮಾರ್ ಮೇಲೆ ಹಲ್ಲೆ ಮಾಡಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಆಗಿನ ಸಿಪಿಐ ರಮೇಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಅದರಲ್ಲಿ 10 ಸಾವಿರ ರೂ. ಹಣವನ್ನು ಶಿವಕುಮಾರ್ ಪತ್ನಿಗೆ ಪರಿಹಾರ ರೂಪದಲ್ಲಿ ಕೊಡುವಂತೆ ಆದೇಶ ಹೊರಡಿಸಿದ್ದಾರೆ.