ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಫಲವನಹಳ್ಳಿಯಲ್ಲಿ ಕೂಲಿ ಕಾರ್ಮಿಕ ಮಹಿಳೆಯನ್ನು ಕೊಂದು ಇಡೀ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಲದಹಳ್ಳಿ ಹಾಗೂ ಮುಷ್ಯಾನ ಹಾಳ್ ಗ್ರಾಮದ ಬಳಿ ಇರಿಸಲಾಗಿದ್ದ ಬೋನ್ನಲ್ಲಿ ಚಿರತೆ ಸೆರೆಯಾಗಿದ್ದು, ಇಡೀ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಬೋನ್ನಲ್ಲಿ ಸೆರೆಯಾದ ಚಿರತೆ: ಹೊನ್ನಾಳಿ ಅರಣ್ಯ ವ್ಯಾಪ್ತಿಗೆ ಬರುವ ಅಲದಹಳ್ಳಿ ಹಾಗೂ ಮುಷ್ಯಾನ ಹಾಳ್ ಗ್ರಾಮಗಳ ಗಡಿಭಾಗದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಬೋನುಗಳನ್ನು ಅಳವಡಿಕೆ ಮಾಡಿದ್ದರು. ಎರಡು ಬೋನುಗಳ ಪೈಕಿ ಒಂದರಲ್ಲಿ ಈ ಪುಂಡ ಚಿರತೆ ಸೆರೆಯಾಗಿದೆ.
ಇನ್ನು, ಸೆರೆಯಾದ ಚಿರತೆಗೆ ಗಾಯಳಾಗಿದ್ದು, ಅದನ್ನು ಶಿವಮೊಗ್ಗ ಬಳಿಯ ಲಯನ್ ಸಫಾರಿಗೆ ಕೊಂಡೊಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದೆಂದು ಅರಣ್ಯ ಇಲಾಖೆಯ ಡಿಎಫ್ಓ ಜಗನ್ನಾಥ್ ಹಾಗೂ ಹೊನ್ನಾಳಿ ರೇಂಜರ್ ಆಫೀಸರ್ ಯೋಗೇಶ್ ಅವರು ಮಾಹಿತಿ ನೀಡಿದ್ರು.
ಕೂಲಿ ಕಾರ್ಮಿಕ ಮಹಿಳೆ ಬಲಿ: ಒಂದು ವಾರದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿರತೆ ಕಳೆದ ಒಂದು ವಾರದ ಹಿಂದೆ ಜಮೀನಿನಲ್ಲಿ ಕಳೆ ಕೀಳುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಕಮಲಬಾಯಿ ಎಂಬುವವರನ್ನು ಬಲಿ ಪಡೆದಿತ್ತು. ಈ ಘಟನೆ ಬಳಿಕ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿತ್ತು.
ಓದಿ: ಶಿವಮೊಗ್ಗದಲ್ಲಿ ಬೋನಿಗೆ ಬಿದ್ದ ಚಿರತೆ.. ನಿಟ್ಟುಸಿರು ಬಿಟ್ಟ ಜನತೆ