ಹರಿಹರ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ತ್ಯಾಗ ಮತ್ತು ದೃಢತೆ ಎಂಬ ಸೂತ್ರವನ್ನು ಅಳವಡಿಸಿಕೊಂಡು ಅಭ್ಯಾಸ ಮಾಡಿದರೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಪನ್ಮೂಲ ವ್ಯಕ್ತಿ ಡಾ. ಅತುಲ್ ಬೆಂಗೆರೆ ಹೇಳಿದರು.
ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಎಂ.ಕೆ.ಇ.ಟಿ ವಿದ್ಯಾಸಂಸ್ಥೆಯಲ್ಲಿ ನಡೆದ ಪರೀಕ್ಷಾ ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಉತ್ತಮ ಭವಿಷ್ಯವಿದೆ ಎಂದರು.
ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಒತ್ತಡ ಮಾಡಿಕೊಳ್ಳದೆ ಅಂದಿನ ಪಾಠವನ್ನು ಅಂದೇ ಓದಿದರೆ ಯಾವುದೆ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸಬಹುದು. ಪ್ರಶ್ನೆಗೆ ಸ್ಪಷ್ಟವಾಗಿ ಮತ್ತು ನಿಖರವಾಗಿ ಹಾಗೂ ಸುಂದರವಾಗಿ ಅಕ್ಷರವನ್ನು ಬರೆಯುವುದರಿಂದ, ಮೌಲ್ಯಮಾಪಕರಿಗೆ ನಿಮ್ಮ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಲು ಸಹಾಯವಾಗುತ್ತದೆ ಮತ್ತು ನೀವು ಉತ್ತಮ ಅಂಕಗಳಿಸಬಹುದು ಎಂದು ಕಿವಿ ಮಾತು ಹೇಳಿದರು.