ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಮೂರು ದಿನಗಳ ಕಾಲ ಕೃಷಿಮೇಳ ನಡೆಯಲಿದ್ದು, ಕೇರಳದ ಹಲ್ವಾದಂತಹ ಸಿಹಿ ತಿಂಡಿಗಳಿಂದ ಹಿಡಿದು ಕುರುಕಲು ತಿಂಡಿಗಳು ಜನರ ಗಮನ ಸೆಳೆಯುತ್ತಿವೆ.
ಕೇರಳದ ಹೆಸರಾಂತ ಏಳು ಬಗೆಯ ಹಲ್ವಾ ಜನ್ರನ್ನು ಕೈಬಿಸಿ ಕರೆಯುತ್ತಿದೆ. ದಾವಣಗೆರೆ ನಗರದಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಮೂರು ದಿನ ಕೃಷಿ ಮೇಳ ನಡೆಯಲಿದೆ. ಇಂದಿನಿಂದ ಮೂರು ದಿನಗಳ ಕಾಲ ಜರಗುವ ಕೃಷಿ ಮೇಳವನ್ನು ಪಾಲಿಕೆ ಮೇಯರ್ ಎಸ್ ಟಿ ವೀರೇಶ್ ರವರು ಚಾಲನೆ ನೀಡಿದರು.
ಕೇರಳದ ಕ್ಯಾಲಿಕಟ್ನ ಹಲ್ವಾ ಬಾಯಿಯಲ್ಲಿ ನೀರು ಸುರಿಸುವಂತಿತ್ತು. ಮಸ್ಕತ್ ಹಲ್ವಾ, ಅನಜೀರ್ ಹಲ್ವಾ, ಪೈನಾಪಲ್ ಹಲ್ವಾ, ಡ್ರೈ ಫ್ರೂಟ್ ಹಲ್ವಾ, ಬಾದಮ್ ಹಲ್ವಾ, ಕ್ಯಾರೇಟ್ ಹಲ್ವಾ, ಬಾಳೆ ಹಣ್ಣಿನ ಹಲ್ವಾ ಹೀಗೆ ತರಹೆವಾರಿ ಹಲ್ವಾದ ರುಚಿಯನ್ನು ನೋಡಿ, ಜನ ಖರೀದಿ ಮಾಡಿದರು.
ಹಲ್ವಾದಲ್ಲಿ ಎರಡು ಬೆಲೆಗಳಿದ್ದು, ಪೈನಾಪಲ್, ಅನಜೀರ್, ಕ್ಯಾರೇಟ್ ಹಲ್ವಾ ಒಂದು ಕೆಜಿಗೆ 400 ರೂಪಾಯಿ. ಇನ್ನು ಬಾದಾಮ್ ಹಾಗೂ ಡ್ರೈ ಫ್ರೂಟ್ ಹಲ್ವಾದ ಬೆಲೆ ಒಂದು ಕೆಜಿಗೆ 600 ರೂಪಾಯಿ ಇದೆ. ಇನ್ನು ಕೃಷಿ ಮೇಳದಲ್ಲಿ ನೆರೆದಿದ್ದ ಜನ ಕಾಸಿನ ಮುಖ ನೋಡದೆ ಕಿಲೋ ಗಟ್ಟಲೆ ಖರೀದಿ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು
ಇನ್ನು ಈ ಹಲ್ವಾ ಅಲ್ಲದೇ ಕೆಲ ಕುರುಕಲು ತಿಂಡಿ ಪೋತರು ಮೂವತ್ತು ವಿವಿಧ ಬಗೆಯ ಕುರುಕಲು ತಿಂಡಿ ಅಂಗಡಿಗೆ ಲಗ್ಗೆ ಇಟ್ಟು ಖರೀದಿ ಮಾಡಿದ್ರು. ಮೈಸೂರು ಮೂಲದ ಸ್ವಾಮೀ ಎನ್ನುವರು ಮನೆಯಲ್ಲಿ ತಯಾರಿಸಿದ ಚಿಪ್ಸ್, ಹೆಸರು ಕಾಳು, ಅವರೆ ಕಾಳು, ಒಂಬತ್ತು ಬಗೆಯ ನವಧಾನ್ಯದ ಕಾಳು, ಮೂಂಗ್ ದಾಲ್, ಬಾಳೆ ಕಾಯಿ ಚಿಪ್ಸ್, ಹಾಗಲ ಕಾಯಿ ಚಿಪ್ಸ್, ಬಾದಾಮ್ ಬಿಸ್ಕೆಟ್, ರಾಗಿ ಬಿಸ್ಕೆಟ್, ಬೆಣ್ಣೆ ಬಿಸ್ಕೆಟ್ ಹೀಗೆ ತರಹೇವಾರಿ ಕುರುಕಲು ತಿಂಡಿಗಳನ್ನು ಕೃಷಿ ಮೇಳದಲ್ಲಿ ಸ್ಟಾಲ್ ಹಾಕಿ ಮಾರಾಟ ಮಾಡುತ್ತಿದ್ದಾರೆ.