ದಾವಣಗೆರೆ : ಅರಣ್ಯ ಇಲಾಖೆಗೆ ಸೇರಿದ್ದ ನೂರಾರು ಎಕರೆ ಜಾಗ ಅದು, ಈ ಜಾಗದ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದಲ್ಲದೆ, ಒತ್ತುವರಿ ಮಾಡಿಕೊಂಡು ಲೇಔಟ್ ಮಾಡಿ ನಿವೇಶನ ಹಂಚಿಕೆ ಮಾಡಿದ್ದರು. ಆದರೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರುವುಗೊಳಿಸಿ ವೃಕ್ಷೋದ್ಯಾನ ಮಾಡಿದ್ದಾರೆ. ಸದ್ಯ ಈ ತಾಣವೀಗ ಪ್ರವಾಸಿಗರ ಹಾಟ್ ಫೇವರಿಟ್ ಜಾಗವಾಗಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಮಾವಿನಕಟ್ಟೆ ಅರಣ್ಯ ಪ್ರದೇಶದ ವ್ಯಾಪ್ತಿಗೊಳಪಟ್ಟಿದ್ದ 102 ಎಕರೆ ಭೂಮಿ ಈ ಹಿಂದೆ ಪ್ರಭಾವಿ ವ್ಯಕ್ತಿಗಳ ಪಾಲಾಗಿತ್ತು.ಕೆಲವರಂತೂ ನಿವೇಶನ ಮಾಡಿ ಮಾರಾಟವನ್ನೂ ಮಾಡಿದ್ದರು. ಈ ವಿಚಾರ ಅರಣ್ಯ ಇಲಾಖೆಯ ಅರಿವಿಗೆ ಬಂದಿರಲಿಲ್ಲ, ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ 102 ಎಕರೆ ಒತ್ತವರಿ ತೆರವುಗೊಳಿಸಿ 59 ಲಕ್ಷ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣ ಮಾಡಿದೆ. ಅಲ್ಲದೆ ವಿವಿಧ ಜಾತಿಯ ಎರಡು ಸಾವಿರ ಸಸಿಗಳನ್ನು ನೆಟ್ಟಿದೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡದಾದ ವೃಕ್ಷೋದ್ಯಾನ ಎಲ್ಲಿಯೂ ಇಲ್ಲ, ಇಲ್ಲಿಗೆ ಬರುವ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರುಬಂಡಿ ಸೇರಿದಂತೆ ವಿವಿಧ ಆಟಿಕೆಗಳಿವೆ. ಉದ್ಯಾನವನದಲ್ಲಿ ಸಾಂಸ್ಕೃತಿಕ, ಸಾಹಿತ್ಯಾತ್ಮಕ ಕಾರ್ಯಕ್ರಮ ರೂಪಿಸಲು ಗೋಪುರ ಮಂಟಪ ನಿರ್ಮಿಸಲಾಗಿದೆ. ಇನ್ನು ಪಾರ್ಕ್ಗೆ ಬರುವಂತಹ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರತ್ಯೇಕ ಶೌಚಗೃಹ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ.
ವೃಕ್ಷೋದ್ಯಾನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಸಾರ್ವಜನಿಕರು ವಾಕಿಂಗ್ ಮಾಡಲು ವಾಕಿಂಗ್ ಪಾತ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಯೂ ಪ್ರಾರಂಭವಾಗಿದೆ. ವೃಕ್ಷೋದ್ಯಾನ ಸುಂದರ ಮತ್ತು ಜಿಲ್ಲೆಯಲ್ಲಿ ಮಾದರಿ ಎಂಬುವಂತೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಅಂತಾರೆ ಮಾವಿನಕಟ್ಟೆ ಅರಣ್ಯ ಪ್ರದೇಶದ ವಲಯ ಅರಣ್ಯಾಧಿಕಾರಿ ವೀರೇಶ್ ನಾಯ್ಕ.