ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆ ಗರಂ ಆಗಿವೆ. ತಕ್ಷಣ ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸಬೇಕು ಎಂದು ಡಿಸೆಂಬರ್ 5ಕ್ಕೆ ಕರೆದಿರುವ ಕರ್ನಾಟಕ ಬಂದ್ಗೆ ದಾವಣಗೆರೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಬಂದ್ ಬೆಂಬಲಿಸುವಂತೆ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಗುಲಾಬಿ ಹೂವು ನೀಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ)ದ ಕಾರ್ಯಕರ್ತರು ವಿನೂತನವಾಗಿ ಮನವಿ ಮಾಡಿಕೊಂಡರು.
ದಾವಣಗೆರೆ ನಗರದ ಎವಿಕೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಗುಲಾಬಿ ಹೂವು ನೀಡುವ ಕಾರ್ಯಕ್ರಮಕ್ಕೆ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡರು ಚಾಲನೆ ನೀಡಿ, ಅಂಗಡಿ ಹಾಗೂ ಹೋಟೆಲ್ ಮಾಲೀಕರಿಗೆ ಗುಲಾಬಿ ಹೂವು ನೀಡುವ ಮೂಲಕ ಡಿ.5ಕ್ಕೆ ಕರೆ ನೀಡಿರುವ ಬಂದ್ಗೆ ಬೆಂಬಲಿಸುವಂತೆ ಮನವಿ ಮಾಡಿದರು. ಇನ್ನು ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೂ ಕೂಡ ಹೂವು ನೀಡಿ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡರು.