ದಾವಣಗೆರೆ: 16 ತಿಂಗಳ ಶಿಷ್ಯವೇತನ ನೀಡುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಷ್ಕರ ಕೈಬಿಟ್ಟಿದ್ದ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಲಿಖಿತ ಆದೇಶ 10 ದಿನಗಳೊಳಗೆ ನೀಡಬೇಕು. ಇಲ್ಲದಿದ್ದರೆ ಜು.30ರಿಂದ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜು.30ರೊಳಗೆ ಲಿಖಿತ ಭರವಸೆ ಸಿಗದಿದ್ದರೆ ಮತ್ತೆ ಮುಷ್ಕರ: ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಎಚ್ಚರಿಕೆ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ವೈದ್ಯ ಡಾ. ರಾಹುಲ್, 2019ರ ಮಾರ್ಚ್ನಿಂದ 2020ರ ಜೂನ್ ವರೆಗಿನ ಬಾಕಿ ಶಿಷ್ಯ ವೇತನವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಡಿಸಿ ಹಾಗೂ ಎಸ್ಪಿ ತಿಳಿಸಿದ್ದರು.ಆಡಳಿತ ಮಂಡಳಿ ಜೊತೆ ಚರ್ಚಿಸಿ ಜು.20ರೊಳಗೆ ಲಿಖಿತವಾಗಿ ನೀಡುವುದಾಗಿ ಹೇಳಲಾಗಿತ್ತಾದರೂ ನಮಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಎರಡು ಬೇಡಿಕೆಗಳ ಪೈಕಿ ಒಂದರ ಬಗ್ಗೆ ಮಾತ್ರ ತೀರ್ಮಾನಕ್ಕೆ ಬಂದಿದ್ದು, ಜು.20ರಿಂದ ಶಿಷ್ಯವೇತನ ನೀಡಲು ಕಾಲೇಜು ಆಡಳಿತ ಮಂಡಳಿ ಕಾಲಾವಕಾಶ ಕೇಳಿದೆ. ಇದಕ್ಕೆ ಒಪ್ಪಿದರೆ ಸರ್ಕಾರಿ ವೈದ್ಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವಷ್ಟೇ ಶಿಷ್ಯವೇತನ ನಮಗೆ ನೀಡಬೇಕು.
ಆಡಳಿತ ಮಂಡಳಿ ಶಿಷ್ಯವೇತನ ಸರ್ಕಾರಕ್ಕೆ ನೀಡಿ, ಆ ಹಣ ಸರ್ಕಾರದಿಂದಲೇ ನಮಗೆ ಬರಬೇಕು. 10 ದಿನಗಳೊಳಗೆ ಲಿಖಿತ ಆದೇಶ ಬರದಿದ್ದರೆ ಜು. 30ರಿಂದ ಮತ್ತೆ ರಸ್ತೆಗಿಳಿದು ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.