ದಾವಣಗೆರೆ: ಶಿಷ್ಯ ವೇತನಕ್ಕೆ ಒತ್ತಾಯಿಸಿ ಕಳೆದ 10 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಥಿತಿ ಈಗ ತ್ರಿಶಂಕು ಆಗಿದೆ.
ಬೆಳಗ್ಗೆ 10 ಗಂಟೆಗೆ ಜಯದೇವ ವೃತ್ತದಲ್ಲಿ ಎಂದಿನಂತೆ ಮುಷ್ಕರ ನಡೆಸಿದ ಪ್ರತಿಭಟನಾಕಾರರು ಬಳಿಕ ಗುಂಡಿ ಸರ್ಕಲ್ವರೆಗೆ ಮಳೆಯ ನಡುವೆಯೂ ಮೆರವಣಿಗೆ ನಡೆಸಿದರು. ನಂತರ ಜೆಜೆಎಂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ತೆರಳಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಕಾಲೇಜಿನ ಆಡಳಿತ ಮಂಡಳಿ ಶಿಷ್ಯ ವೇತನ ನೀಡಲು ಸಾಧ್ಯವಿಲ್ಲ. ನೀವು ಸರ್ಕಾರದ ಬಳಿಯೇ ಕೇಳಬೇಕು. ಆಸ್ಪತ್ರೆಯ ವೈದ್ಯರಿಗೆ ತಿಂಗಳಿಗೆ ಕೋಟಿ ರೂಪಾಯಿಗೂ ಹೆಚ್ಚು ವೇತನ ನೀಡಲಾಗುತ್ತಿದೆ. ರ‌್ಯಾಂಕ್ ಬಂದಿರುವ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಸೀಟು ಪಡೆದು ಬಂದಿದ್ದಾರೆ. ಶಿಷ್ಯವೇತನ ನೀಡುವಂತೆ ನಾನೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸಿ. ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ, ಕಳೆದ ಸೋಮವಾರವಷ್ಟೇ ಸರ್ಕಾರ ಶಿಷ್ಯವೇತನ ನೀಡಲ್ಲ. ಸಿಎಂ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಶಾಮನೂರು ಶಿವಶಂಕರಪ್ಪ ಅವರ ಜೊತೆ ಮಾತನಾಡಿದ್ದಾರೆ. ಆಡಳಿತ ಮಂಡಳಿ ನೀಡಲು ಒಪ್ಪಿದೆ ಎಂದಿದ್ದರು. ಆದರೆ ಈಗ ಆಡಳಿತ ಮಂಡಳಿಯೂ ಸ್ಟೇಫಂಡ್ ನೀಡಲಾಗುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದೆ.
ಇದರಿಂದಾಗಿ ಮುಷ್ಕರ ನಿರತರು ಕಂಗಾಲಾಗಿದ್ದು, ತಮ್ಮ ಹೋರಾಟ ಶಿಷ್ಯವೇತನ ಸಿಗುವವರೆಗೆ ನಿಲ್ಲದು ಎಂಬ ಎಚ್ಚರಿಕೆ ನೀಡಿದ್ದಾರೆ.