ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಲೆದೋರಿದೆ. ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂಬುದಾಗಿ ಬಂಡಾಯ ನಾಯಕರು ಹೇಳಿಕೆ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಟಿಕೆಟ್ ಸಿಗದೆ ಬಂಡೆದ್ದು ಸ್ಪರ್ಧಿಸಿರುವವರ ಜೊತೆ ಪಕ್ಷದ ಮುಖಂಡರು ಮಾತನಾಡಿದ್ದು, ಮತ್ತೆ ಮನವೊಲಿಸುವ ಪ್ರಶ್ನೆಯೇ ಉದ್ಭವಿಸದು. ಹಾಗಾಗಿ ನಿರ್ಧಾರ ಬದಲಿಸದೇ ಇದ್ದರೆ ನವೆಂಬರ್ 8 ರಂದು ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗರಂ ಆದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ಮಹಿಳಾ ಮೋರ್ಚಾದವರು ಪ್ರತಿ ಮನೆಗೂ ಹೋಗಿ ಹೆಣ್ಣು ಮಕ್ಕಳ ಮನವೊಲಿಸಿ. ಅವರ ಪತಿ ಕಾಂಗ್ರೆಸ್ ಆಗಿದ್ದರೂ ಬಿಡಬೇಡಿ. ಒಂದು ಮತವಾದರೂ ಬಿಜೆಪಿ ಹಾಕಿ ಎನ್ನಿ. ಸಾಧ್ಯವಾದರೆ ಪುರುಷರ ಮತವೂ ನಮಗೆ ಬರಲಿ. ಹೆಣ್ಣು ಮಕ್ಕಳ ಮಾತು ಯಾರೂ ಮೀರುವುದಿಲ್ಲ. ನನ್ನನ್ನೂ ಸೇರಿಕೊಂಡು ಹೇಳುತ್ತೇನೆ ಎಂದರು.
ಯುವ ಮೋರ್ಚಾ ಅಧ್ಯಕ್ಷೆ 21 ಮಹಿಳೆಯರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು. ಆಗ ಈಶ್ವರಪ್ಪ ನಮ್ಮ ಮೀಸೆಗೆ ಬೆಲೆ ಇಲ್ಲವೇ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರಲ್ಲದೇ, ಮಹಿಳೆಯರು ಮನಸ್ಸು ಮಾಡಿದರೆ ಗೆಲುವು ಕಷ್ಟವಾಗಲಾರದು. ಪ್ರತಿಯೊಬ್ಬ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಳೆದ ಬಾರಿಯ ಶಿವಮೊಗ್ಗ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲೂ ಮುಸ್ಲೀಮರ ಮತಗಳು ನನಗೆ ಬಿದ್ದಿವೆ. ಮುಸಲ್ಮಾನ ಹೆಣ್ಣುಮಕ್ಕಳು ನನ್ನ ಮನೆಗೆ ಕಷ್ಟ ಹೇಳಿಕೊಂಡು ಬರುವಾಗ ಬುರ್ಖಾ ಹಾಕಿಕೊಂಡು ಬರುತ್ತಿದ್ದರು. ಅವರ ಸಮಸ್ಯೆಗೆ ಸ್ಪಂದಿಸಿದ ಬಳಿಕ ಅಕ್ಕ ತಂಗಿಯರಂತೆ ಬುರ್ಖಾ ತೆಗೆದು ಬರುತ್ತಿದ್ದಾರೆ ಎಂದು ಹೇಳಿದರು.