ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗ್ತಿಲ್ಲ. ದಿನೇದಿನೆ ಪ್ರಕರಣ ಜಾಸ್ತಿಯಾಗುತ್ತಿವೆ. ಆಸ್ಪತ್ರೆಗೆ ದಾಖಲಾಗುವವರು ಹೆಚ್ಚಾಗ್ತಿದ್ದಾರೆ. ತೀವ್ರ ಉಸಿರಾಟ, ಜ್ವರ, ಕೆಮ್ಮು, ಶೀತ, ಉಸಿರಾಟ ಸಮಸ್ಯೆಯಿಂದ ಬಳಲುವವರೇ ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂತಹ ವೇಳೆಯಲ್ಲಿ ಆ್ಯಕ್ಸಿಜನ್ ಅತ್ಯವಶ್ಯಕವಾಗಿ ಬೇಕು. ಆಮ್ಲಜನಕ ಪೂರೈಕೆ ಅವಶ್ಯಕತೆಗೆ ಬೇಕಾದಷ್ಟು ಜಿಲ್ಲೆಯಲ್ಲಿ ಇದೆಯೋ ಇಲ್ಲವೋ ಎಂಬ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಕೊರೊನಾ ಬಂದ ಬಳಿಕ ಆಸ್ಪತ್ರೆಗಳಿಗೆ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಸಾವನ್ನಪ್ಪಿದವರು ಜಾಸ್ತಿಯಾಗುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇಲ್ಲಿಗೆ ಬಳ್ಳಾರಿಯ ಆ್ಯಕ್ಸಿಜನ್ ಪ್ಲಾಂಟ್ನಿಂದ ಅಗತ್ಯವಿರುವಷ್ಟು ಆ್ಯಕ್ಸಿಜನ್ ಸಿಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಪ್ಲಾಂಟ್ ಇರುತ್ತದೆ. ಹಾಗಾಗಿ, ಹೆಚ್ಚಿನ ಅವಶ್ಯಕತೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಇದೆ.
ಶೀತ, ಕೆಮ್ಮು, ಜ್ವರದಿಂದ (ಐಎಲ್ಐ) ಬಳಲುತ್ತಿದ್ದ 331 ಜನರು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿದ್ದ 901 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆ್ಯಕ್ಸಿಜನ್ ಬೇಕಾಗುತ್ತದೆ. ಜಿಲ್ಲಾಸ್ಪತ್ರೆಗೆ ಬೇಕಾದಷ್ಟು ಆಮ್ಲಜನಕ ತರಿಸಿಕೊಳ್ಳಲಾಗ್ತಿದೆ. ಪ್ರತಿ ಗಂಟೆಗೊಮ್ಮೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಡ್ರಗ್ ಕಂಟ್ರೋಲರ್ ನಿಗಾ ವಹಿಸುತ್ತಿದ್ದಾರೆ.
350 ರಿಂದ 600 ಆ್ಯಕ್ಸಿಜನ್ ಸಿಲಿಂಡರ್ ಬೇಕಾಗುತ್ತದೆ. ಈಗ ನಮ್ಮಲ್ಲಿ 350 ಸಿಲಿಂಡರ್ ಸಂಗ್ರಹವಿದೆ. ಬೇಡಿಕೆ ಹೆಚ್ಚಾದ್ರೆ ಆಗಲೂ ನಮ್ಮಲ್ಲಿ ಸಿಗುತ್ತದೆ. ಹೀಗಾಗಿ, ಯಾವುದೇ ತೊಂದರೆಯಿಲ್ಲ. ರೋಗಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳಿದ್ದಾರೆ.
ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾದ್ರೆ ಚಿಕಿತ್ಸೆ ನೀಡಬಹುದು. ಉಳಿಸಲು ಕಷ್ಟ ಸಾಧ್ಯ ಎನ್ನುವಾಗ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಲಾಗುತ್ತಿದೆ. ಈ ವೇಳೆ ವೆಂಟಿಲೇಟರ್ ಹಾಗೂ ಆ್ಯಕ್ಸಿಜನ್ ನೀಡಿ ಎಂದು ರೋಗಿಗಳ ಸಂಬಂಧಿಕರು ಒತ್ತಾಯ ಮಾಡ್ತಾರೆ. ಆದರೆ, ಅದನ್ನು ಅಳವಡಿಸುವುದು ಬಿಡುವುದು ತಜ್ಞ ವೈದ್ಯರು ನಿರ್ಧಾರ ಮಾಡುತ್ತಾರೆ. ಜಿಲ್ಲೆಯಲ್ಲಿ ಆ್ಯಕ್ಸಿಜನ್ ಸಮರ್ಪಕವಾಗಿ ಸಿಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ತಿಳಿಸಿದ್ದಾರೆ.