ದಾವಣಗೆರೆ: ಯುಪಿಎಸ್ಸಿ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್ ಗಳಿಸುವ ಮೂಲಕ ಬೆಣ್ಣೆ ನಗರಿಗೆ ಅವಿನಾಶ್ ಕೀರ್ತಿ ತಂದಿದ್ದಾರೆ. ರಾಜ್ಯದ ಮತ್ತೋರ್ವ ಯುವಕ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನದ ಬಂಡಿ ಸಾಗಿಸಬೇಕಾದ ಪರಿಸ್ಥಿತಿ ಇದ್ದರೂ ಅದೆಲ್ಲವನ್ನು ಮೆಟ್ಟಿ ನಿಂತು ಅತ್ಯುತ್ತಮ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಈ ಯುವಕನಿಗೆ ಕುಸ್ತಿಯಲ್ಲಿ ಮಿಂಚುವ ಆಸೆ, ಮನೆಯಲ್ಲಿ ಬಡತನ ಇದ್ದರೂ ಛಲಬಿಡದ ಆ ಯುವಕ ಇಂದು ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟಿದ್ದಾರೆ. ದಾವಣಗೆರೆಯ ಕ್ರೀಡಾ ಹಾಸ್ಟೆಲ್ನಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿರುವ ಯುವಕ ಉಮೇಶ್ ಜಮಾದಾರ್ ಥೈಲ್ಯಾಂಡ್ ನಲ್ಲಿ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕುಸ್ತಿ ಪಟು ಉಮೇಶ್ ಜಮಾದಾರ್ ಕಳೆದ 13 ವರ್ಷಗಳಿಂದ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಕುಸ್ತಿ ತರಬೇತುದಾರರಾದ ಶಿವಾನಂದ್ ಅವರ ಬಳಿ ತರಬೇತಿ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.
ಥೈಲ್ಯಾಂಡ್ ನಲ್ಲಿ ನಡೆದ ಸೌತ್ ಏಷ್ಯನ್ ಇಂಟರ್ನ್ಯಾಷನಲ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ಉಮೇಶ್ ಅವರು 65 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಮಲೇಷಿಯಾ ದೇಶದ ಕುಸ್ತಿ ಪಟುವಿನ ವಿರುದ್ಧ 10-00 ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಇದಲ್ಲದೆ ಉಮೇಶ್ ಮಲೇಷಿಯಾ, ಥೈಲ್ಯಾಂಡ್, ಇಂಡೋನೇಷ್ಯಾ, ಸಿಂಗಾಪುರ್, ನೇಪಾಳ್ ದೇಶದ ಕುಸ್ತಿಪಟುಗಳನ್ನು ಬಗ್ಗು ಬಡಿದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಉಮೇಶ್ ಜಮಾದಾರ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ನಿವಾಸಿಯಾಗಿದ್ದು, ಕುಸ್ತಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದರು.
ಬಡತನದಲ್ಲಿ ಅರಳಿದ ಈ ಕ್ರೀಡಾ ಪ್ರತಿಭೆ ಉಮೇಶ್ ಕಷ್ಟಪಟ್ಟು ಸಾಧನೆ ಮಾಡಿ ತೋರಿಸಿದ್ದಾರೆ. ಈ ಹಿಂದೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕ ಪಡೆದಿದ್ದರು. ಇದೀಗ ಥೈಲ್ಯಾಂಡ್ ನಲ್ಲಿ ಮತ್ತೊಮ್ಮೆ ಚಿನ್ನದ ಪದಕ ಗೆದ್ದು ದಾವಣಗೆರೆ ಹಾಗು ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಉಮೇಶ್ ಅವರ ಈ ಸಾಧನೆಗೆ ಕುಸ್ತಿ ತರಬೇತುದಾರರಾದ ಶಿವಾನಂದ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಉಮೇಶ್ ಅವರು ದಾವಣಗೆರೆಯ ಕ್ರೀಡಾ ಹಾಸ್ಟೆಲ್ ನದಲ್ಲಿದ್ದುಕೊಂಡೇ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.
ಓದಿ : ರಾಜ್ಯಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ: ಹರಿಯಾಣದಲ್ಲಿ 'ಕೈ'ಗೆ ಕುದುರೆ ವ್ಯಾಪಾರದ ಭೀತಿ