ದಾವಣಗೆರೆ: ಸೂಕ್ತವಾಗಿ ಕಾರ್ಯನಿರ್ವಹಿಸದ ಕಾರಣ ಚಿಗಟೇರಿ ಜಿಲ್ಲಾಸ್ಪತ್ರೆಯ ಸರ್ಜನ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆದೇಶಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಸರ್ಜನ್ ಹುದ್ದೆಯಿಂದ ಡಾ. ನಾಗರಾಜ್ ಅವರನ್ನು ಬಿಡುಗಡೆಗೊಳಿಸಿ ಆದೇಶ ನೀಡುವ ಮೂಲಕ ಡಿಸಿ ಶಾಕ್ ನೀಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಆದರೂ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದ ಕಾರಣ ಹಾಗೂ ಡಾ. ನಾಗರಾಜ್ರ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದವು. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸರಿಪಡಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಗರಾಜ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ಆಸ್ಪತ್ರೆಯ ವೈದ್ಯರು, ಅರೆಕಾಲಿಕ ನರ್ಸ್, ಸಿಬ್ಬಂದಿ ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಜೊತೆ ಸಮನ್ವಯ ಸಾಧಿಸಲು ನಾಗರಾಜ್ ಅವರಿಂದ ಆಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಡಾ. ನಾಗರಾಜ್ ಹುದ್ದೆಗೆ ಹಿರಿಯ ವೈದ್ಯ ಡಾ. ಸುಭಾಷ್ ಚಂದ್ರರನ್ನು ನೇಮಿಸಲಾಗಿದೆ. ಇನ್ಮುಂದೆ ಸುಭಾಷ್ ಜಿಲ್ಲಾಸ್ಪತ್ರೆಯ ಸರ್ಜನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಜಿಲ್ಲಾಡಳಿತ ಪರಿವರ್ತನೆ ಮಾಡಿದೆ. ಸದ್ಯ 79 ಸಕ್ರಿಯ ಕೊರೊನಾ ಸೋಂಕು ಪೀಡಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.