ದಾವಣಗೆರೆ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ನಡೆದಿದೆ.
ಕುರಿಗಾಯಿ ಮೈಲಪ್ಪ ಎಂಬವರು ತನ್ನ ಕುರಿಗಳನ್ನು ಜಮೀನೊಂದರಲ್ಲಿ ಮೇಯಲು ಬಿಟ್ಟಿದ್ದರು. ನಿನ್ನೆ ಮೇವು ತಿಂದಿದ್ದ ನೂರಾರು ಕುರಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಬಳಿಕ ಸಾವನ್ನಪ್ಪಿವೆ ಎಂಬ ಮಾಹಿತಿ ದೊರೆತಿದೆ.
ಕುರಿಗಳ ಸಾವಿನ ಬಗ್ಗೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದ್ದು, ಯಾವ ವಿಷಪೂರಿತ ಸೊಪ್ಪು ಸೇವಿಸಿ ಮೃತಪಟ್ಟಿವೆ ಎಂಬುದು ಗೊತ್ತಾಗಿಲ್ಲ. ಕುರಿಗಳ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.
ಘಟನೆಯಿಂದ ಕುರಿಗಾಯಿ ಮೈಲಪ್ಪಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.