ದಾವಣಗೆರೆ: ಹರಿಹರ ಮತ್ತು ಹೊಸಪೇಟೆ ಮಾರ್ಗದ ಪ್ರಯಾಣಿಕರ ನಲ್ವತ್ತು ವರ್ಷಗಳ ಆಸೆಯನ್ನು ಈಡೇರಿಸಿದ ಕೀರ್ತಿ ಈ ರೈಲಿಗೆ ಸಲ್ಲುತ್ತದೆ ಎಂದರೇ ತಪ್ಪಾಗಲಾರದು.
ಹೌದು ನಾಲ್ಕು ದಶಕದ ನಂತರ ಹೊಸಪೇಟೆ - ಹರಿಹರ ಮಾರ್ಗದಲ್ಲಿ ರೈಲು ಸಂಚರಿಸುವುದು ಎಲ್ಲರಿಗೂ ಖುಷಿಯ ವಿಚಾರ, ಇಂದು ಹೊಸಪೇಟೆಯಿಂದ ಹರಿಹರ ನಗರಕ್ಕೆ ಬಂದ ರೈಲನ್ನು ನೋಡಿದ ಜನರು ಹಾಗೂ ಜನಪ್ರತಿನಿಧಿಗಳು ಖುಷಿಯಿಂದ ಸ್ವಾಗತಿಸಿದರು.
ಇದೇ ವೇಳೆ, ಶಾಸಕ ಎಸ್. ರಾಮಪ್ಪ ಅವರು ರೈಲಿಗೆ ಹೂವಿನಹಾರವನ್ನು ಹಾಕಿ ಸ್ವಾಗತಿಸಿ ನಂತರ ಮಾತನಾಡಿದ ಅವರು, ನಗರದಲ್ಲಿನ ನಿಲ್ದಾಣದಲ್ಲಿ ಮೂರು ರೈಲುಗಳು ತಂಗುತ್ತವೆ. ಬೆಳಗ್ಗೆ ಒಂದು ರೈಲು ಚಿತ್ರದುರ್ಗಕ್ಕೆ ಎರಡನೇ ರೈಲು ಹೊಸಪೇಟೆಗೆ ಪ್ರಯಾಣ, ಮತ್ತೊಂದು ಯಶವಂತಪುರಕ್ಕೆ ಪ್ರಯಾಣ ಬೆಳೆಸುತ್ತವೆ ಎಂಬುದು ತಾಲೂಕಿಗೆ ಹೆಮ್ಮಯ ವಿಷಯ. ಅ.18ರಿಂದ ಟ್ರೇನ್ ನಂ: 56529 ಹರಿಹರ-ಕೊಟ್ಟೂರು-ಹೊಸಪೇಟೆ ಮತ್ತು ಟ್ರೇನ್ ನಂ. 56530 ಹೊಸಪೇಟೆ-ಕೊಟ್ಟೂರು-ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ನಿತ್ಯ ಸಂಚರಿಸಲಿದೆ. ತಾಲೂಕಿನ ಪ್ರಯಾಣಿಕರು ಸುಖಕರ ಪ್ರಯಾಣ ನಡೆಸಲು ರೈಲನ್ನು ಬಳಸಿಕೊಳ್ಳಿ ಎಂದು ಹೇಳಿದರು.
ಹೊಸದಾಗಿ ಬಂದ ರೈಲನ್ನು ಸ್ವಾಗತಿಸಲು ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರನ್ನು ಹೊರತುಪಡಿಸಿದರೆ ಉಳಿದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಬರದೇ ಇರುವುದು ಸಾರ್ವಜನಿಕರಿಗೆ ಬೇಸರದ ಸಂಗತಿ. ತಾಲೂಕಿಗೆ ಹೊಸ ರೈಲು ಬಂದಾಗ ಎಲ್ಲಾ ಪಕ್ಷದ ಮುಖಂಡರು ಬರಬೇಕಿತ್ತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.